ಲಾಕ್‌ಡೌನ್‌ ನಿರ್ಧಾರ ಸಿಎಂಗೆ ಬಿಟ್ಟ ವಿಚಾರ: ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸಬೇಕೆ , ಬೇಡವೇ ಎನ್ನುವುದರ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೋವಿಡ್‌ 19 ನಿಗ್ರಹ ಕಾರ್ಯಪಡೆ ಸಭೆಯ ಬಳಿಕ ಮಾತನಾಡಿದ ಅವರು, ‘ಸಭೆಯಲ್ಲಿ ಲಾಕ್‌ಡೌನ್‌ ವಿಷಯ ಕುರಿತಂತೆ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲವೆಂದು ನಾನು ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮುಖ್ಯಮಂತ್ರಿಗೆ ಮನದಟ್ಟು ಮಾಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ನಗರ ಮತ್ತು ಕೆಲವು ಜಿಲ್ಲೆಗಳಲ್ಲಿ ಅನೇಕ ಕಾರಣಗಳಿಂದ ಇತ್ತೀಚೆಗೆ ಸೋಂಕು ಹೆಚ್ಚಿದೆ. ಸೋಂಕು ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್‌ಡೌನ್‌ ಮಾಡಬೇಕು. ಇಡೀ ವ್ಯವಸ್ಥೆ ಅಚ್ಚುಕಟ್ಟಾಗಿ, ಪಾರದರ್ಶಕ ರೀತಿಯಲ್ಲಿ ಕೈಗೊಳ್ಳಬೇಕು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಸಚಿವರು ಸಂಘಟಿತವಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದರು