ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆಯಿಂದ ಭೂಕಬಳಿಕೆ: ಸ್ಥಳೀಯರಿಂದ ಸೇನೆ ವಿರುದ್ದ ಪ್ರತಿಭಟನೆ

ಇಸ್ಲಾಮಾಬಾದ್: ಇಲ್ಲಿನ ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್‌ನ ಸಂಪನ್ಮೂಲ-ಸಮೃದ್ಧ ಪ್ರದೇಶಗಳನ್ನು ಪಾಕ್ ಸರ್ಕಾರ ಮತ್ತು ಸೇನೆಯು ಅತಿಕ್ರಮಿಸುತ್ತಿರುವ ವಿರುದ್ದ ಇಲ್ಲಿನ ಸ್ಥಳೀಯ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಸರ್ಕಾರದ ಶೋಷಕ ನೀತಿಗಳ ವಿರುದ್ಧ ಪಿಒಕೆ ಭಾಗವಾಗಿರುವ ಈ ಪ್ರದೇಶದಲ್ಲಿ ವ್ಯಾಪಕ ಕೋಪ ಮತ್ತು ಅಸಮಾಧಾನವಿದೆ.

ಮಾಧ್ಯಮ ವರದಿಗಳ ಪ್ರಕಾರ, ಗಿಲ್ಗಿಟ್ ಬಾಲ್ಟಿಸ್ತಾನದ ಸ್ಥಳೀಯರು ಪಾಕಿಸ್ತಾನದ ಸೇನೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ ಅಥವಾ ಪಾಕಿಸ್ತಾನ್ ರೇಂಜರ್‌ಗಳು, ಅರೆಸೈನಿಕ ಪಡೆಗಳು ತಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು  ಅನುಮತಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶದಲ್ಲಿರುವ ಅರಣ್ಯ ಸಂಪತ್ತನ್ನು ನಾಶ ಮಾಡುವುದರಿಂದ ಪ್ರಕೃತಿಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಗಮನಹರಿಸುವಂತೆ ಯು.ಕೆ.ಪಿ.ಎನ್.ಪಿ ಮುಖ್ಯಸ್ಥ ಶೌಕತ್ ಅಲಿ ಕಶ್ಮೀರಿ ಅಲ್ಲಿನ ಪರಿಸರವಾದಿಗಳಲ್ಲಿ ಮನವಿ ಮಾಡಿದ್ದಾರೆ.

ಪ್ರದೇಶದ ಮುಜಫರಾಬಾದ್ ಜಿಲ್ಲೆಯ ಹೀರ್ ಕೋಟ್ಲಿ ಎಂಬಲ್ಲಿ ಅರಣ್ಯ ಪ್ರದೇಶವನ್ನು ರಕ್ಷಣಾ ಕಾಮಗಾರಿಗಳಿಗಾಗಿ ಶಿಬಿರ ನಿರ್ಮಿಸಲು ಸೇನೆಗೆ ನೀಡುವ ಬಗ್ಗೆ ಇಲ್ಲಿನ ಸ್ಥಳಿಯ ನಾಗರಿಕರಿಗೆ ಅಸಮಾಧಾನವಿದೆ. ಅಲ್ಲದೆ ಇಲ್ಲಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಕೂಡಾ ಸೇನೆಯ ಬಳಿ ಇಲ್ಲ ಎಂದು ಆರೋಪಿಸಲಾಗಿದೆ.