ಲಂಡನ್: ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಲಿಜ್ ಟ್ರಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಬ್ರಿಟನ್ ನ ಪ್ರಧಾನಿ ರೇಸ್ ನಲ್ಲಿ ಮಾಜಿ ಚಾನ್ಸೆಲರ್ ರಿಷಿ ಸುನಕ್ ಕೂಡಾ ಇದ್ದರು. ಬ್ರಿಟನ್ ಗಂಭೀರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಈ ಸಮಯದಲ್ಲಿ ಯಾರೇ ಪ್ರಧಾನಿಯಾದರೂ ಅದು ಮುಳ್ಳಿನ ಮೇಲಿನ ನಡಿಗೆಯಾಗಿರುತ್ತದೆ.
ಪ್ರಧಾನಿ ಗಾದಿಗೆ ನಡೆದ ಚುನಾವಣೆಯಲ್ಲಿ 47 ವರ್ಷದ ಟ್ರಸ್, ಶೇಕಡಾ 57.4 ಮತಗಳನ್ನು ಗಳಿಸಿ ರಿಷಿ ಸುನಕ್ ವಿರುದ್ದ ಮೇಲುಗೈ ಸಾಧಿಸಿದರು. ಈಕೆ ಆರು ವರ್ಷಗಳಲ್ಲಿ ಬ್ರಿಟನ್‌ನ ನಾಲ್ಕನೇ ಪ್ರಧಾನ ಮಂತ್ರಿ ಮತ್ತು ಮಾರ್ಗರೆಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಮೂರನೇ ಮಹಿಳಾ ನಾಯಕಿ.
ಎರಡಂಕಿಯ ಹಣದುಬ್ಬರ, ಕಾಡುತ್ತಿರುವ ಆರ್ಥಿಕ ಹಿಂಜರಿತ, ಕಾರ್ಮಿಕ ಅಶಾಂತಿ, ಗಗನಕ್ಕೇರುತ್ತಿರುವ ಮನೆಯ ಇಂಧನ ಬಿಲ್‌ಗಳು ಮತ್ತು ಈ ಚಳಿಗಾಲದಲ್ಲಿ ಸಂಭವನೀಯ ಇಂಧನ ಕೊರತೆ ಮುಂತಾದ ಸಮಸ್ಯೆಗಳು ಟ್ರಸ್ ಅವರನ್ನು ಸ್ವಾಗತಿಸುತ್ತಿವೆ. ಮಾಜಿ ಪ್ರಧಾನಿ ಜಾನ್ಸನ್ ಅವರ ಪ್ರಕ್ಷುಬ್ಧ ಮೂರು ವರ್ಷಗಳ ಅಧಿಕಾರಾವಧಿಯ ನಂತರ ಆಳವಾಗಿ ವಿಭಜಿಸಲ್ಪಟ್ಟ ಪಕ್ಷವನ್ನು ಸರಿಪಡಿಸುವ ಜವಾಬ್ದಾರಿಯೂ ಆಕೆಯ ಮೇಲಿದೆ.
ಜಾನ್ಸನ್ ಅವರ ಕ್ಯಾಬಿನೆಟ್‌ನಲ್ಲಿ ಸೇವೆ ಸಲ್ಲಿಸಿದ ಮತ್ತು ಅವರ ನಿರ್ಗಮನಕ್ಕೆ ಕಾರಣವಾದ ಟೋರಿ ದಂಗೆಯ ಭಾಗವಾಗದ ಟ್ರಸ್, ಮಂಗಳವಾರ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ರಜಾ ವಿಹಾರದಲ್ಲಿರುವ ರಾಣಿ ಎಲಿಜಬೆತ್ II ರೊಂದಿಗಿನ ಸಭೆಯಲ್ಲಿ ಔಪಚಾರಿಕವಾಗಿ ಪ್ರಧಾನ ಮಂತ್ರಿ ಪಟ್ಟವನ್ನು ಪಡೆದುಕೊಳ್ಳಲಿದ್ದಾರೆ. ಟ್ರಸ್ ಚುನಾವಣೆ ಗೆಲ್ಲುವುದರೊಂದಿಗೆ ರುಷಿ ಸುನಕ್ ಮತ್ತು ಬೋರಿಸ್ ಜಾನ್ಸನ್ ಇಬ್ಬರ ರಾಜಕೀಯ ಭವಿಷ್ಯವೂ ಸದ್ಯದ ಮಟ್ಟಿಗಂತೂ ಮಂಕಾಗಿದ್ದು, ಮುಂದಿನ ಚುನಾವಣೆವರೆಗೂ ಕಾಯಬೇಕಿದೆ.
ಒಂದು ವೇಳೆ ಸುನಕ್ ಗೆದ್ದಿದ್ದರೆ, ಬ್ರಿಟಿಷ್ ಇತಿಹಾಸದಲ್ಲಿ ಮೊದಲ ಬಿಳಿಯೇತರ ಪ್ರಧಾನ ಮಂತ್ರಿಯಾಗಿ ಅವರು ತಮ್ಮದೇ ಆದ ಇತಿಹಾಸವನ್ನು ನಿರ್ಮಿಸುತ್ತಿದ್ದರು. ತೆರಿಗೆ ಕಡಿತಕ್ಕೆ ವಿರೋಧ ಮತ್ತು ಜಾನ್ಸನ್ ಸರಕಾರದ ಪತನದಲ್ಲಿ ಅವರ ಕೈವಾಡದಿಂದಾಗಿ ಬ್ರಿಟನ್ನರು ಅವರನ್ನು ತಮ್ಮ ಪ್ರಧಾನಿಯಾಗಿ ಚುನಾಯಿಸಲಿಲ್ಲ ಎನ್ನಲಾಗುತ್ತದೆ. ಟ್ರಸ್ 81,326 ಮತಗಳನ್ನು ಗಳಿಸಿದರೆ, ಸುನಕ್ ಅವರ 60,399 ಮತಗಳನ್ನು ಪಡೆದಿದ್ದಾರೆ.