ಎರಡು ದಶಕಗಳಿಂದ ಹರಕುಮುರುಕು ಗುಡಿಸಲಿನಲ್ಲಿಯೇ ಬದುಕು; ಮಲ್ಪೆಯ ಈ ಬಡಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ.!

ಉಡುಪಿ: ಕಳೆದ 20 ವರ್ಷಗಳಿಂದಲೂ ಈ ಬಡದಂಪತಿಗಳಿಗೆ ಮಡಲಿನ ಗುಡಿಸಲೇ ಅರಮನೆಯಾಗಿದೆ. ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ಹರಕುಮುರುಕು ಗುಡಿಸಲಿನಲ್ಲಿ ಬದುಕು ಸವೆಸುತ್ತಿರುವ ಈ ಕುಟುಂಬದ ಸ್ಥಿತಿ ದಾರುಣವಾಗಿದೆ.

ಇಂದೋ‌ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಗುಡಿಸಲು, ಮರಳು ಮಣ್ಣಿನ ನೆಲದಲ್ಲಿ ಬದುಕು, ತುಂಡು ತುಂಡಾದ ಟರ್ಪಲೇ ರಕ್ಷಣೆ. ಇದು ಮಲ್ಪೆ ತೊಟ್ಟಂನ ಬಡದಂಪತಿಗಳ ಕರುಣಾಜನಕ ಸ್ಥಿತಿ.

ಹೌದು, ಮಲ್ಪೆ ತೊಟ್ಟಂ ಪಡುಕೆರೆ ಶಾಂತಿ ನಗರದ ನಿವಾಸಿಗಳಾದ ಸದಾನಂದ ಮತ್ತು ಜಲಜ ಎಂಬುವವರ ಮನೆಯು ತೀವ್ರ ದುಸ್ಥಿತಿಯಲ್ಲಿದೆ. ಇವರು ತುಂಡು ತುಂಡಾದ ಟರ್ಪಲು ಹೊದ್ದ ಗುಡಿಸಲು, ಮರಳು ಮಣ್ಣಿನ ನೆಲದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಂತೂ ಇವರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಮಳೆ ನೀರು ಮನೆಯೊಳಗೆ ಬರುವುದರಿಂದ ಬಸ್ ಸ್ಟ್ಯಾಂಡ್ ನಲ್ಲಿಯೇ ದಿನ ಕಳೆಯುವ ದುಸ್ಥಿತಿ.

ಸರ್ಕಾರದ ಯಾವುದೇ ಮೂಲಸೌಕರ್ಯ ದೊರಕದೆ, ಈ ಬಡ ಕುಟುಂಬದ ಬದುಕು ದುಸ್ತರವಾಗಿದೆ. ಈ ಬಡ ಕುಟುಂಬಕ್ಕೆ ಹೇಳಿಕೊಳ್ಳುವವರು ಯಾರು ಇಲ್ಲ. ಮಕ್ಕಳು ಕೂಡ ಇಲ್ಲ. ಸುಮಾರು 20 ವರ್ಷದಿಂದ ಇಲ್ಲಿ ಬದುಕು ಸಾಗಿಸುತ್ತಿದ್ದು, ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇನ್ನು ಮನೆ ಕಟ್ಟುವುದು ಕನಸಿನ ಮಾತಾಗಿದೆ.

ಹೀಗಾಗಿ ಈ ಬಡದಂಪತಿಗಳಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶದಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಹೃದಯಿಗಳು ಒಟ್ಟಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಿದೆ. ಈ ಮಹತ್ತರ ಕಾರ್ಯಕ್ಕೆ ಮಾನವೀಯ ದೃಷ್ಟಿಯಿಂದ ಸಾಧ್ಯವಾದಷ್ಟು ಧನಸಹಾಯವನ್ನು ಮಾಡಿಯೆಂದು ‘ಸತ್ಯದ ತುಳುವೆರ್ ಉಡುಪಿ-ಮಂಗಳೂರು’ ಸಂಘಟನೆ ವಿನಂತಿಸಿಕೊಂಡಿದೆ.