ಉಡುಪಿ: ಪುರಭವನದಲ್ಲಿ ಜು.19 ರಂದು ನಡೆದ ಲಯನ್ಸ್ ಕ್ಲಬ್ ಉಡುಪಿ ಮಿಡ್-ಟೌನ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಮಾಜಿ ಗವರ್ನರ್ ಹಾಗೂ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಇವರು ವಿದ್ಯಾಪೋಷಕ್ಗೆ 3 ಲಕ್ಷ ರೂಗಳ ದೇಣಿಗೆ ನೀಡಿದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದು, ದೇಣಿಗೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಲಯನ್ಸ್ ಮಾಜಿ ಗವರ್ನರ್ಗಳಾದ ಪಿ. ಕಿಶೋರ್ ರಾವ್, ಮಧುಸೂದನ ಹೆಗ್ಡೆ, ಬಸ್ರೂರು ರಾಜೀವ ಶೆಟ್ಟಿ ಹಾಗೂ ಮಿಡ್-ಟೌನ್ ಲಯನ್ಸ್ ನ ನೂತನ ಅಧ್ಯಕ್ಷ ಅನಂತ ಶೆಟ್ಟಿ ಕೆ., ಕಾರ್ಯದರ್ಶಿ ನಟರಾಜ ಉಪಾಧ್ಯ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ನಲ್ಲಿ ಸಮಾಜಮುಖಿ ಕಾರ್ಯದಿಂದ ಉನ್ನತ ಸ್ಥಾನ ಅಲಂಕರಿಸಿರುವ ವಿ. ಜಿ. ಶೆಟ್ಟರು ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿ ತನ್ನ ದುಡಿಮೆಯ ದೊಡ್ಡಪಾಲನ್ನು ಸಮಾಜಕ್ಕೆ ಸಮರ್ಪಿಸುತ್ತಾ ಮಾದರಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತನಂತೆ ವಿದ್ಯಾಪೋಷಕ್ ಮನೆ ಭೇಟಿಯಲ್ಲಿ ಪಾಲ್ಗೊಂಡು, ಪ್ರತೀ ವರ್ಷ ದೊಡ್ಡ ಮೊತ್ತದ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ, ಇಂತಹ ದಾನಿಗಳಿಂದಾಗಿ ಯಕ್ಷಗಾನ ಕಲಾರಂಗ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.