ಉಡುಪಿ: ಇಂದಿನ ದಿನದಲ್ಲಿ ಸರಕಾರಗಳ, ಸಂಪುಟ ಸಭೆಯ ಪ್ರತಿಯೊಂದು ತೀರ್ಮಾನವೂ ಮತ ಬ್ಯಾಂಕ್ ಆಧಾರಿತವಾಗಿರುವುದು ದುರದೃಷ್ಟಕರ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ.
ಅವರು ಕರಾವಳಿ ಕರ್ನಾಟಕದ ಪ್ರಥಮ ಲಯನ್ಸ್ ಕ್ಲಬ್ ಆದ ಲಯನ್ಸ್ ಕ್ಲಬ್ ಉಡುಪಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಕ್ರಾಮಿಕ ರೋಗಗಳು ಹಿಂದೆಯೂ ಬಂದಿವೆ. ಮುಂದೆಯೂ ಬರುತ್ತವೆ. ಆದರೂ ನಿರಾಶವಾದಿಗಳಾಗುವ ಅಗತ್ಯವಿಲ್ಲ. ಜನರು ಧೃತಿಗೆಡದೆ ಸಮಸ್ಯೆಯನ್ನು ಎದುರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದರು.
“ಅನಾರೋಗ್ಯವಾದರೆ ಹೆದರಬೇಡಿ, ಗುಟ್ಟು ಮಾಡಬೇಡಿ ಮತ್ತು ಸ್ವ-ಚಿಕಿತ್ಸೆ ಮಾಡಬೇಡಿ. ವೈದ್ಯರು- ಆರೋಗ್ಯ ಸಹಾಯಕರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ” ಎಂದ ಅವರು, “ಇಂತಹ ಸಂದರ್ಭದಲ್ಲಿ ಜನರು ಅನಾರೋಗ್ಯದ ಬಗ್ಗೆ ಮುಜುಗರ ಪಡದೆ ಹೇಳಿಕೊಳ್ಳುವ ವಾತಾವರಣ ಸೃಷ್ಟಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ” ಎಂದರು.
ಡಾ. ಆಳ್ವ ಅವರು ವಜ್ರ ಮಹೋತ್ಸವದ ಸವಿ ನೆನಪಿಗೆ ಲಯನ್ಸ್ ಭವನದ ಎದುರು ಲಯನ್ ಎಡ್ವರ್ಡ್ ಸುಮಿತ್ರ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಸ್ವಾಗತ ಕಮಾನನ್ನು ಉದ್ಘಾಟಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಅವರು ನೂತನ ಲಯನ್ಸ್ ಸಾರ್ವಜನಿಕ ವಾಚನಾಲಯವನ್ನು ಉದ್ಘಾಟಿಸಿದರು. ಮಾಜಿ ಜಿಲ್ಲಾ ಗವರ್ನರ್ ಎನ್.ಎಂ. ಹೆಗ್ಡೆ ಅವರು ಲಯನ್ಸ್ ಚಿಲ್ಡ್ರನ್ಸ್ ಹೆಲ್ತ್ ಪಾರ್ಕನ್ನು ಉದ್ಘಾಟಿಸಿದರು. ಇನ್ನೋರ್ವ ಮಾಜಿ ಜಿಲ್ಲಾ ಗವರ್ನರ್ ಎ.ಆರ್. ಉಜ್ಜನಪ್ಪ ಅವರು ಸ್ಮರಣ ಸಂಚಿಕೆ “ಡೈಮಂಡ್- ದ ಲೀಡರ್” ಅನ್ನು ಬಿಡುಗಡೆಗೊಳಿಸಿದರು.
ಲಯನ್ಸ್ ಕ್ಲಬ್ ಉಡುಪಿ 2021-22ನೇ ಸಾಲಿನ ಅಧ್ಯಕ್ಷ ಡಯಾನ ಎಂ. ವಿಠಲ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು.
ಲಯನ್ಸ್ ಕ್ಲಬ್ ಉಡುಪಿ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕೋಶಾಧಿಕಾರಿ ಲೂಯಿಸ್ ಲೋಬೊ ದಾನಿಗಳ ವಿವರ ನೀಡಿದರು. ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ ವಂದಿಸಿದರು. ನಿರುಪಮಾ ಪ್ರಸಾದ್ ಶೆಟ್ಟಿ ಪ್ರಾರ್ಥನೆ ಹಾಡಿದರು. ಹರೀಶ್ ಕಿಣಿ ಹಾಗೂ ರೂಪಾ ಡಿ. ಕಿಣಿ ಕಾರ್ಯಕ್ರಮ ನಿರೂಪಿಸಿದರು.