ಸಿಡಿಲು ಆ್ಯಪ್ ನಿಂದ ದೊರೆಯಲಿದೆ ಸಿಡಿಲಿನ ಮುನ್ಸೂಚನೆ: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿನೂತನ ತಂತ್ರಜ್ಞಾನ

ಉಡುಪಿ: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿಡಿಲಿನಿಂದ ರಕ್ಷಣೆ ಪಡೆಯಬಹುದಾದ ಸರಳ ಮಾರ್ಗಗಳನ್ನು ತಿಳಿಸಿದೆ. ಸಿಡಿಲು-ಮೊಬೈಲ್‌ ಆ್ಯಪ್ ನಲ್ಲಿ ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

  • ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಹೊರಗಿನ ಕೆಲಸಗಳನ್ನು ಮುಂದೂಡಿ, ಆದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ.
  • ಮನೆಯ ಸುತ್ತಲಿನಲ್ಲಿರುವ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು.
  • ಮನೆಯ ಒಳಗಿರುವಾಗ ಕಿಟಕಿಯಿಂದ ದೂರವಿರಬೇಕು, ಈ ಸಂದರ್ಭದಲ್ಲಿ ದೂರವಾಣಿ, ಮೊಬೈಲ್ ಮತ್ತುಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು.
  • ಗೃಹಪಯೋಗಿ ಉಪಕರಣಗಳ ಪ್ಲಗ್‌ಗಳನ್ನು ತೆಗೆದಿಡಬೇಕು. ಗೋಡೆಯಿಂದ ದೂರವಿರುವುದು ಉತ್ತಮ.
  • ಒಣಮರದ ಪೀಠೋಪಕರಣಗಳು ಸುರಕ್ಷಿತವಾಗಿದ್ದು, ಸಾಧ್ಯವಾದಷ್ಟು ಅವನ್ನೇ ಬಳಸಬೇಕು.
  • ವಿದ್ಯುತ್ ಆಘಾತದ ಅಪಾಯ ಇರುವುದರಿಂದ ಸಿಡಿಲಿನ ಸಂದರ್ಭದಲ್ಲಿ ಸ್ನಾನ ಮತ್ತು ಪಾತ್ರೆ ತೊಳೆಯುವುದು ಹಾಗೂ ಇತರ ನೀರಿನೊಂದಿಗಿನ
    ಕೆಲಸವನ್ನು ಮಾಡಬಾರದು.
  • ಹೊರಾಂಗಣದಲ್ಲಿದ್ದಾಗ ಸಿಡಿಲು ಬರುವ ಲಕ್ಷಣಗಳಿದ್ದಲ್ಲಿ ತಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಸೇರಿಕೊಳ್ಳಬೇಕು.
  • ಎತ್ತರ ಪ್ರದೇಶದಲ್ಲಿ ಸಿಡಿಲಿನ ಪ್ರಭಾವ ಅಧಿಕವಾಗಿರುವುದರಿಂದ ತಗ್ಗು ಪ್ರದೇಶಗಳಿಗೆ ತೆರಳಬೇಕು.
  • ಸಿಡಿಲಿನ ಸಂದರ್ಭದಲ್ಲಿ ಕೊಡೆ ಅಥವಾ ಛತ್ರಿಯನ್ನು ಬಳಸಬಾರದು. ಮಕ್ಕಳು ಈ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸಬಾರದು.
  • ವಾಹನ ಚಲಿಸುವ ಸಂದರ್ಭದಲ್ಲಿ ಸಿಡಿಲು ಬಂದಾಗ ಮರ ಹಾಗೂ ತಂತಿಕಂಬಗಳಿಂದ ವಾಹನವನ್ನು ದೂರ ನಿಲ್ಲಿಸಿ, ವಾಹನದೊಳಗೆ ಇರುವುದು ಸೂಕ್ತ.
  • ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಿಟಕಿಗಳ ಗಾಜನ್ನು ಮುಚ್ಚಬೇಕು.
  • ಕಾಡಿನಲ್ಲಿದ್ದ ಸಂದರ್ಭದಲ್ಲಿ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯುಬೇಕು.
  • ಗುಂಪಿನಲ್ಲಿದ್ದಾಗ ಜನರಿಂದ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.