ಅಪಾರ ಆದಾಯ ತಂದುಕೊಡಬಲ್ಲ ಮಲ್ಲಿಗೆ ಕೃಷಿ ಕೃಷಿನರ ಕೈಯಿಡಿದು ಬದುಕುಕಟ್ಟಿಕೊಡುತ್ತದೆ. ನಮಗೆಲ್ಲಾ ಗೊತ್ತು ಈ ಮಲ್ಲಿಗೆ ಹೂವಿನ ಪರಿಮಳಕ್ಕೆ ಮನಸೋಲದವರು ಯಾರೂ ಇಲ್ಲ. ಒಂದು ಕುಟುಂಬದ ದಿಕ್ಕನ್ನು ಈ ಮಲ್ಲಿಗೆ ಕೃಷಿ ಬದಲಾಯಿಸಿದೆ ಎಂದರೆ ನಂಬಲೇಬೇಕು.
ಹೌದು,ಕಾರ್ಕಳದ ಎಳ್ಳಾರೆಯ ಸಂಪಿಗೆಟ್ಟೆಯ ತಾರನಾಥ ಪ್ರಭು ದಂಪತಿ ಮಲ್ಲಿಗೆ ಹೂವಿನ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ ಬದುಕುಕಟ್ಟಿಕೊಂಡಿದ್ದಾರೆ. ತಾರಾನಾಥ ಜ್ಯೋತಿ ದಂಪತಿಗಳು ಶಂಕರಪುರ ಮಲ್ಲಿಗೆ ನಾಟಿ ಕಾರ್ಯ ಹಾಗೂ ನಿರ್ವಹಣೆ ಮಾಡುತ್ತಾರೆ.
ತಮ್ಮ ಹದಿನೈದು ಸೆಂಟ್ಸ್ ಜಾಗದಲ್ಲಿ ಎಂಬತ್ತು ಗಿಡಗಳನ್ನು ನಾಟಿ ಮಾಡಿ ಉತ್ತಮ ಮಲ್ಲಿಗೆ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಬಿಸಿಲು ಬೀಳುವ ಪ್ರದೇಶ ಕೆಂಪು ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ. ಭೂಮಿಯನ್ನು ಹದಗೊಳಿಸಿ, ಗಿಡದಿಂದ ಗಿಡಕ್ಕೆ ಎಂಟು ಅಡಿ ಅಂತರದಲ್ಲಿ ಎರಡು ಅಡಿ ಅಗಲ, ಎರಡು ಅಡಿ ಆಳವಾಗಿ ಗುಂಡಿ ತೆಗೆಯಬೇಕು. ಅದಕ್ಕೆ ಎರಡು ಬಟ್ಟಿ ಹಟ್ಟಿಗೊಬ್ಬರ ಹಾಕಿ ಅದರ ಮೇಲೆ ಮಣ್ಣು ಮುಚ್ಚಿ, ಗಿಡ ನಾಟಿ ಮಾಡಬೇಕು. ಪ್ರತಿ ಹದಿನೈದು ದಿನಕ್ಕೊಮ್ಮೆ ಕಡಲೆಹಿಂಡಿ ದನದ ಸೆಗಣಿ ಹಾಗು ಅದರ ಜೊತೆ ಕಹಿಬೇವಿನ ಹಿಂಡಿಯನ್ನು ಅಲ್ಪ ಪ್ರಮಾಣದಲ್ಲಿ ಸೇರಿಸಿ ಹಾಕಬೇಕು. ಆರಂಭದ ದಿನಗಳಲ್ಲಿ ಇಳುವರಿ ಸ್ವಲ್ಪ ಕಡಿಮೆಯಾಗಿದ್ದು ಮತ್ತೆ ಎರಡು ತಿಂಗಳ ಬಳಿಕ ಹೆಚ್ಚು ಇಳುವರಿ ನೀಡುತ್ತದೆ.
“ಸಾಮಾನ್ಯವಾಗಿ ಪೊದೆಯಾಕಾರದಲ್ಲಿ ಬೆಳೆದು ಉದ್ದನೆಯ ಚೂಪಾದ ಒಂದು ಸುತ್ತಿನ ಸುಗಂಧಭರಿತ ಸಣ್ಣಗಾತ್ರದ ಹೂಗಳು ಜನವರಿಯಿಂದ ನವೆಂಬರ್ ತಿಂಗಳವರೆಗೂ ಬಿಡುತ್ತದೆ. ಇದರ ಮೊಗ್ಗುಗಳು ಕೊಯ್ಲಿಗೆ ನಂತರ 10-12 ಗಂಟೆಗಳವರೆಗೂ ಅರಳುವುದಿಲ್ಲ ಮತ್ತು ಬೇಗ ಬಾಡುವುದಿಲ್ಲ. ಅದರಂತೆ ಈಗ ಮಾರುಕಟ್ಟೆ ಒಂದು ಅಟ್ಟೆಗೆ 1050 ರೂಪಾಯಿ ಇದ್ದು ಲಾಭದಾಯಕವಾಗಿದೆ ಎನ್ನುತ್ತಾರೆ ತಾರನಾಥ ಪ್ರಭು.
ಮಳೆಗಾಲ ಹಾಗೂ ಚಳಿಗಾಲದಲ್ಲಿ ಕೆಲವು ಸಮಯದಲ್ಲಿ ಹೂವಿನ ಇಳುವರಿ ಕಡಿಮೆಯಿದ್ದು ಕಾಲಕಾಲಕ್ಕೆ ಬೇಡಿಕೆ ಏರಿಳಿತವಾಗುತ್ತದೆ.
“ನಿತ್ಯ ನಾಲ್ಕು ಅಟ್ಟೆ ಮಲ್ಲಿಗೆ ಹೂವು ಇಳುವರಿ ಬರುತ್ತಿದೆ. ಅದಕ್ಕಾಗಿ ಕಾಲಕಾಲಕ್ಕೆ ಹುಳುಭಾಧೆಗಳು ಕಾಣಿಸಿದಾಗ ಕ್ರಿಮಿನಾಶಕ ಬಳಕೆ ಮಾಡುತ್ತೇನೆ ಆದರೆ ಸಾವಯವ ಹಟ್ಟಿಗೊಬ್ಬರದ ಬಳಕೆಯೆ ಮೂಲಾಧಾರ ಎನ್ನುವುದು ತಾರನಾಥ್ ಪ್ರಭುಗಳ ಅಭಿಮತ.
ಹದಿನೈದು ವರ್ಷ ಹಳೆ ಗಿಡಗಳನ್ನು ಕಟಾವುಮಾಡಿ ಹೊಸ ತಳಿಯ ಗಿಡಗಳನ್ನು ನಾಟಿಮಾಡುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೂವಿನ ಇಳುವರಿ ನಿರೀಕ್ಷಿಸುತ್ತಿದ್ದಾರೆ ತಾರಾನಾಥ ಪ್ರಭು ದಂಪತಿ. ಏನೇ ಆಗಲಿ ಇವರ ಮಲ್ಲಿಗೆ ಕೃಷಿ ಯುವ ಕೃಷಿಕರಿಗೂ ಮಾದರಿ.
♦ರಾಮ್ ಅಜೆಕಾರ್