» ಮಂಜುಳಾ.ಜಿ.ತೆಕ್ಕಟ್ಟೆ
ಎಲ್ಲರಿಗೂ ಒಂದು ಕನಸು, ತುಡಿತ ಇದೆ.ಬದುಕನ್ನು ಖುಷಿಯಿಂದ ಬದುಕಬೇಕೆಂದು. ಏಕೆಂದರೆ ಇರುವುದು ಒಂದೇ ಬದುಕು. ಒಮ್ಮೆ ಕೈ ಜಾರಿ ಹೋದರೆ ಮರಳಿ ಬಾರದು ಎಂಬ ಕಟುವಾಸ್ತವ ನಮ್ಮೆಲ್ಲರಿಗೂ ಗೊತ್ತು. ನಿತ್ಯವೂ ಬದುಕಿನ ಕುರಿತು ನಮ್ಮದೇ ಕನಸು ಕಾಣುತ್ತಾ ನಾವು ಬದುಕುತ್ತೇವೆ. ಆದರೂ ವೈರುದ್ಯ! ಎಂದರೆ ನಾವು ಕಂಡಂತೆ ಬದುಕು ನೀಲಿ ನಕ್ಷೆ ಪ್ರಕಾರ ನೂರಕ್ಕೆ ನೂರು ಪ್ರತಿಶತ ಹಾಗೆ ನಡೆಯುವುದಿಲ್ಲ. ಅಚಾನಕ್ ತಿರುವುಗಳು ಸಾಕಷ್ಟು ಬರುತ್ತವೆ. ನಾವು ಅಂದುಕೊಂಡಿರುವುದಕ್ಕಿಂತ ಬೇರೇನೇ ಇನ್ನೇನೋ ನಾವು ಅಂದುಕೊಂಡೇ ಇಲ್ಲದಿರುವುದು ಸಂಭವಿಸಬಹುದು . “ಇದನ್ನೇ ಬದುಕು ಅಂತ ಹೇಳೋದು” ಎಂದು ಕೆಲವರು ನಿಮಗೆ ಹಿತವಚನವನ್ನು ನೀಡಲೂಬಹುದು. ಖಂಡಿತ ಅದು ಪರಿಗಣಿಸಬೇಕಾದ ಮಾತು. ಏಕೆಂದರೆ ವಾಸ್ತವ ಪ್ರಪಂಚದಲ್ಲಿ ಹಲವಾರು ಜನರ ಬದುಕಿನಲ್ಲಿ ನಾವು ಸಾಕಷ್ಟು ತಿರುವುಗಳನ್ನ , ಸಾಕಷ್ಟು ಅನಿರೀಕ್ಷಿತ ಸಂದರ್ಭಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ನಾವೇ ಅನುಭವಿಸಿದ್ದೆವು ಕೂಡಾ .
ಆದರೆ ಇವೆಲ್ಲದರ ಒಟ್ಟು ಮೊತ್ತ ಬದುಕಿನಲ್ಲಿ ಒಂದು ಹೊಸ ವಾತಾವರಣ, ಅನುಭವವನ್ನು ಸೃಷ್ಟಿಸುತ್ತದೆ ಅದೇ “ಅನಿವಾರ್ಯತೆ ಬದುಕು” . ಹೌದು ನಾವು ಬದುಕಬೇಕಾಗುತ್ತದೆ ಅನಿವಾರ್ಯತೆ ಬದುಕು. ಮನುಷ್ಯ ಬದುಕು ಒಪ್ಪದೇ ಹೋದರೂ ಆ ಕ್ಷಣಕ್ಕೆ ಬದುಕ ತೊರೆಯುವ ಎಂದರೂ ಯಾವುದೂ ಸಾಧ್ಯವಾಗದೇ ಇರುವ ಹಾಗೆ ಬಂದು ನಮ್ಮನ್ನು ಅವರಿಸುವುದೇ, ನಾವು ಅನುಭವಿಸುವ ವಿಚಿತ್ರ ವೇದನೆಗಳೇ “ಈ ಅನಿವಾರ್ಯತೆಯ ಬದುಕು.
ನಮಗೆಲ್ಲರಿಗೂ ದೇವರು ಒಂದು ಅಗಾಧವಾದ ಶಕ್ತಿ ನೀಡಿದ್ದಾನೆ. ಅದೇ ನಮ್ಮ “ಮೆದುಳು! ನಮ್ಮ ಯೋಚನಾ ಶಕ್ತಿ”. ಅನಿವಾರ್ಯತೆಯ ಬದುಕು ವಾಸ್ತವ ಒಪ್ಪಲೇಬೇಕು, ಆದರೆ ಅದರ ಕುರಿತಾದ ನಮ್ಮ ಯೋಚನೆ, ನಮ್ಮ ದುಗುಡಗಳನ್ನು ಬದಲಿಸಬಹುದು . ನಾವು ಅನಿವಾರ್ಯತೆಯ ಬದುಕನ್ನು ಸವಾಲಾಗಿ ತೆಗೆದುಕೊಂಡು, ಅನಿವಾರ್ಯತೆಯನ್ನು ಪ್ರೀತಿಸಿ ಬಿಡುವುದು, ಅನಿವಾರ್ಯತೆಯನ್ನು ಒಪ್ಪಿ -ಅಪ್ಪಿ ಅದರ ಜೊತೆ ಸಾಗಿಬಿಡುವುದು ಆಗ ತನ್ನಿಂದ ತಾನೇ ಅನಿವಾರ್ಯತೆಗಳು ಅವಕಾಶಗಳಾಗಿ, ದುಗುಡಗಳು ಮಾಯವಾಗಿ , “ಎಲ್ಲವೂ ಮುಗಿಯಿತು ಇನ್ನೇನು ಇಲ್ಲಾ ಎನ್ನುವ ಸ್ಥಿತಿ ಇಂದ, ಇಲ್ಲಾ ಇನ್ನೂ ಎಲ್ಲವು ಮುಗಿದಿಲ್ಲ ಇನ್ನು ಇದೆ ಇನ್ನೇನೋ ಎನ್ನುವ ಸ್ಥಿತಿಗೆ ತಲುಪುತ್ತೇವೆ.
ಅನಿವಾರ್ಯತೆಯ ಬದುಕನ್ನು ಸುಂದರ ಬದುಕನ್ನಾಗಿ ಬದಲಿಸಬಹುದು, ಸಂದರ್ಭಗಳನ್ನ ಬದಲಿಸಲಾಗದಿದ್ದರೂ ನಮ್ಮ ಯೋಚನೆ, ಯೋಜನೆಯನ್ನು ಬದಲಿಸಬಹುದು. ಒಳ್ಳೆ ಚಿಂತನೆ ಯಾತನೆಯನ್ನು ಬದಲಿಸಬಹುದು. ಎಲ್ಲವೂ ನಮ್ಮ ಕೈ ಯಲ್ಲೇ ಇದೆ. “ಅನಿವಾರ್ಯತೆಯ ಬದುಕೇ “ಕಟ್ಟಿಕೊಡಬಹುದು ಒಂದೊಳ್ಳೆ ಬದುಕನ್ನು , ನಮ್ಮ ಯೋಚನಾ ದೃಷ್ಟಿ ಧನಾತ್ಮಕವಾಗಿದ್ದರೆ , “ಬಿದ್ದ ಜಾಗದಲ್ಲೇ ಮೇಲೇಳಬಹುದು. ನಾವು ಅಂದುಕೊಂಡ ಹಾಗೆ ಅಲ್ಲದೇ ಹೋದರೂ, ಖಂಡಿತ ಬೇರೆಯವರು ನಿಮ್ಮಿಂದ ನಿರೀಕ್ಷಿಸದ ರೀತಿಯಲ್ಲಿ ನೀವು ಮೇಲೆ ಏಳಬಹುದು”. ಅವಕಾಶ ಇದೆ ಹುಡುಕಬೇಕು .”ಮನಸ್ಸಿಗೆ ಇಲ್ಲಾ ಮಿತಿ! ನಿಲ್ಲಿಸಬೇಕಾಗಿದೆ ಹಾಕಿಕೊಳ್ಳುವ ಸ್ವಯಂ ಮಿತಿ” .