ಬದುಕಲ್ಲಿ ಅವಕಾಶಗಳು ಸಾವಿರ ಉಂಟು! ಆ ಅವಕಾಶ ಕಳಕೊಂಡು ಆತ್ಮಹತ್ಯೆ ಮಾಡ್ಕೊಬೇಡಿ ಪ್ಲೀಸ್: ಇಂದು ವಿಶ್ವ ಆತ್ಮಹತ್ಯೆ ತಡೆ ದಿನ

ಮಂಜುಳಾ. ಜಿ. ತೆಕ್ಕಟ್ಟೆ
ಮನೆಗೆ ಪುಟ್ಟ ಕಂದಮ್ಮ ಬರುವುದು ಎಂದಾಗ ಮನೆಮಂದಿಗೆಲ್ಲಾ ಆಗುವ ಸಂತೋಷ ಹೇಳ ತೀರದು.  “ಜನನ “ತರುವುದು ಖುಷಿ ಅಪರಿಮಿತ. ಆದರೆ ವಾಸ್ತವ “ಸಾವು” ಬೆನ್ನ ಹಿಂದೆಯೇ ಇರುವುದು. ಅದೊಂದಕ್ಕೇನೋ! ಬಹುಶ ನಾವು ಕೊರಗುವುದು.
“ನಮ್ಮ ಸಾವನ್ನು ನಾವೇ ತಂದು ಕೊಳ್ಳಲು ಪರಿತಪಿಸುವುದು, ಸಾವೊಂದೇ ಪರಿಹಾರವೆಂಬಂತೆ ನಿರ್ಧಾರ ಕೈಗೊಳ್ಳುವುದು” ಇದು ಹೊಸ ವಿದ್ಯಮಾನವಲ್ಲ. ಜಗತ್ತು ಎಂದೋ ಕಂಡುಕೊಂಡಿದೆ, ಇಂದು ಕಾಣುತ್ತಿದೆ, ನಿತ್ಯವು ಅನುಭವಿಸುತ್ತಿದೆ, ಜೊತೆಗೆ ಪ್ರತಿಕ್ಷಣ ತಡೆಯಲು ಕಾದಾಡುತ್ತಿದೆ .ಆ ವಿದ್ಯಮಾನವೇ “ಆತ್ಮಹತ್ಯೆ” . ಇಂದು ನಾವಿದ್ದೇವೆ” ಸೆಪ್ಟೆಂಬರ್ ೧೦” ಇಂದಿನ ದಿನ ವಿಶೇಷವಾಗಿ ವಿಶ್ವವೇ ಮೀಸಲಿಟ್ಟಿದೆ “ಆತ್ಮಹತ್ಯೆಯ ಕುರಿತು ಜಾಗೃತಿ ಮೂಡಿಸಲು ಹಾಗೂ ನಿಯಂತ್ರಿಸುವ ಕ್ರಮಗಳ ಕುರಿತು ಅರಿವು ಮೂಡಿಸಲು”

ಈ ವರ್ಷದ ಧ್ಯೇಯವೇನೆಂದರೆ!

ಪ್ರತಿವರುಷವು ಒಂದೊಂದು ಧ್ಯೇಯದೊಂದಿಗೆ ವರ್ಷ ಪೂರ್ತಿ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಈ ವರುಷ “ಆತ್ಮಹತ್ಯೆಯ ತಡೆಗೆ ಜೊತೆಯಾಗಿ ಕೆಲಸ ಮಾಡುವುದು” (Working together to prevent suicide -Theme of 2020 international suicide prevention day) ಎಂಬ 2019 ರ ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.

ಆತ್ಮಹತ್ಯೆಯ ಆಚೆ ಈಚೆ:

ವಿಶ್ವವ್ಯಾಪಿ ಸಾವಿಗೆ ನೀಡುವ ಕಾರಣಗಳ ಪಟ್ಟಿಯಲ್ಲಿ ಸಾವಿಗೆ ಅತಿದೊಡ್ಡ ಕಾರಣಗಳಲ್ಲಿ ಆತ್ಮಹತ್ಯೆ ಎನ್ನುವುದು “೨೦ ನೇ ದೊಡ್ಡ “ಕಾರಣವಾಗಿದೆ . ಪ್ರತಿ “೪೦ ಸೆಕೆಂಡ್” ಗಳಿಗೆ ಒಂದರಂತೆ ವಿಶ್ವವ್ಯಾಪಿ ಆತ್ಮಹತ್ಯೆ ನೆಡೆಯುತ್ತಿದೆ. ಪ್ರತಿವರ್ಷ ಕೇವಲ ಆತ್ಮಹತ್ಯೆ ಒಂದರಿಂದಲೇ ಸರಿಸುಮಾರು” 1ಮಿಲಿಯನ್” ಜನ ಸಾಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನು” 15 ರಿಂದ 29″ ನಾವೇನು ಯುವಜನತೆ ಎನ್ನುತ್ತೇವೋ !!ಈ ವರ್ಗದಲ್ಲಿ ಅತೀ ಹೆಚ್ಚಿನ ಸಾವಿಗೆ ಆತ್ಮಹತ್ಯೆಯದ್ದೇ ಸಿಂಹಪಾಲು ಎಂದು ಹೇಳುತ್ತಿದೆ.

ಅಂತೆಯೇ “ಮಹಿಳೆಯರು” ಹಾಗೂ “ತೃತೀಯಲಿಂಗಿಗಳಲ್ಲೂ” ಆತ್ಮಹತ್ಯೆಯ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ವರದಿಗಳು ನಮೂದಿಸುತ್ತವೆ. ಕೇವಲ ಆತ್ಮಹತ್ಯೆ ಇಂದ ಸಾವು ಮಾತ್ರವಲ್ಲದೆ ! “ಆತ್ಮಹತ್ಯೆಗೆ ಒಳಗಾದ ವ್ಯಕ್ತಿಯ ಆಪ್ತರಲ್ಲೂ ತೀವ್ರ ತರನಾದ ಭಾವನಾತ್ಮಕ ಹಾಗೂ ಮಾನಸಿಕವಾದ ಸಮಸ್ಯೆಗಳನ್ನು” ಸೃಷ್ಟಿಸಿರುವ ನಿದರ್ಶನಗಳ ಅಂಕಿಅಂಶವು ಹೆಚ್ಚಾಗುತ್ತಿದೆ.

ಆತ್ಮಹತ್ಯೆಯ ಚಿಹ್ನೆಗಳು ಹೀಗುಂಟು

♦ಆತ್ಮಹತ್ಯೆಯ ಬಗ್ಗೆ ಮಾತನಾಡುವುದು.

♦ಆತ್ಮಹತ್ಯೆಗೆ ಪೂರ್ವತಯಾರಿ ಮಾಡಿಕೊಳ್ಳುವುದು.(ಕ್ರಿಮಿನಾಶ ಅಥವಾ ಮಾತ್ರೆಗಳನ್ನ ಸೇರಿಸಿ ಇಟ್ಟುಕೊಳ್ಳುವುದು )

♦ಭವಿಷ್ಯದ ಬಗ್ಗೆ ಭರವಸೆ ಇಟ್ಟುಕ್ಕೊಳದೇ ಇರುವುದು.

ತಮ್ಮ ಆಸ್ತಿ ,ಬೆಲೆಬಾಳುವ ವಸ್ತುಗಳನ್ನು ಮುಂಚಿತವಾಗಿ ನೀಡುವುದು ಬೇರೆಯವರಿಗೆ ಅಥವಾ ಆಪ್ತರ ಜೀವನೋಪಾಯಕ್ಕೆ ತಯಾರಿ ಮಾಡಿ ಇಡುವುದು . ಮನೆಯವರ ,ಆಪ್ತರ, ಸ್ನೇಹಿತರ ಹಾಗು ಸಾಮಾಜಿಕ ಸಂಪರ್ಕಗಳಿಂದ ದೂರವಾಗುವುದು, ಒಂಟಿಯಾಗಿಯೇ ಇರಲು ಇಚ್ಚಿಸುವುದು.

♦.ದುಶ್ಚಟಗಳ ಕಡೆ ಗಮನ ಹರಿಸುವುದು ಹಾಗು ತನ್ನ ಜೀವ ಜೀವನದ ಕಡೆ ಒಲವು ಕಾಳಜಿ ಎರಡು ಇಲ್ಲದವರಂತೆ ವರ್ತನೆ .

♦ಮರಳಿ ಸಾವಿಗೆ ಪ್ರಯತ್ನಿಸುವುದು.

♦ಸಮಸ್ಯೆ ಅಥವಾ ಖಿನ್ನತೆ ಇಂದ ಬಳಲುತ್ತಿದ್ದರೂ ತೋರಿಸಿಕೊಳ್ಳದೆ ಶಾಂತ ಅಥವಾ ಖುಷಿಯಲ್ಲಿ ಇರುವಂತೆ ಇರುವುದು .

ಆತ್ಮಹತ್ಯೆಯ ಕುರಿತ ತಪ್ಪು ಕಲ್ಪನೆ :

ನಮ್ಮಲ್ಲಿ ಸಾಕಷ್ಟು ಮಂದಿಗೆ ಆತ್ಮಹತ್ಯೆಯ ಕುರಿತಂತೆ ತಪ್ಪು ಕಲ್ಪನೆಗಳಿವೆ. ಅವುಗಳು ಯಾವುವು ಎಂದರೆ

♦ಆತ್ಮಹತ್ಯೆ ಗೆ ಹಿಂದೊಮ್ಮೆ ಪ್ರಯತ್ನಿಸಿ ವಿಫಲವಾಗಿದ್ದಾರೆ ಆತ ಮತ್ತೆ ಪ್ರಯತ್ನ ಮಾಡುವುದಿಲ್ಲ ಎಂಬ ನಂಬಿಕೆ .

♦ಸಾವಿನ ಬಗ್ಗೆ ಮಾತನಾಡುವವರು ಸಾಯಲು ಇಷ್ಟಪಡುದಿಲ್ಲ ಎಂಬ ನಿರ್ಲಕ್ಷ .

ಆಪ್ತರೊ ಅಥವಾ ಸ್ನೇಹಿತ ವಲಯದಲ್ಲೂ ಯಾರಲ್ಲಾದರೂ ವರ್ತನೆ ಅಥವಾ ಅವರ ಮಾಸಿಕ ಸ್ಥಿತಿಗತಿಯಲ್ಲಿ ಬದಲಾವಣೆ ಆದರೆ ವೈದ್ಯಕೀಯ ನೆರವು ನೀಡದೆ ಮೂಢನಂಬಿಕೆಗಳತ್ತ ಮನ ಮಾಡುವುದು.
ತೀವ್ರತವಾದ ಆಘಾತ ಅಥವಾ ಹಿಂಸೆ ಇಂದ ಕುಗ್ಗಿ ಹೋದ ವ್ಯಕ್ತಿಗೆ ಬೆಂಬಲವಾಗಿ ನಿಲ್ಲದೆ ಅವರೇ ಸರಿಯಾಗುತ್ತಾರೆ ಎಂದು ಅವರ ಪಾಡಿಗೆ ಅವರನ್ನು ಬಿಡುವುದು ಒಳ್ಳೇದೆಂಬ ಆಲೋಚನೆ.
ಜೀವನ ಪಾಠ ಮೌಲ್ಯಗಳ ಬಗ್ಗೆ ಭೋದನೆ ಮಾಡಿದ ಕೂಡಲೇ ವ್ಯಕ್ತಿಯ ಯೋಚನೆ ಯೋಜನೆ ಬದಲಾಗುವುದು ಎಂದು ಅನಾವಶ್ಯಕ ಸಲಹೆ ಜೊತೆಗೆ ನಿರ್ಧಾರವನ್ನು ಆ ವ್ಯಕ್ತಿಯ ಅನಿಸಿಕೆ ಕೇಳದೆ ನಾವೇ ತೆಗೆದುಕೊಳ್ಳುವುದು.
ಇಂತಹ ಕೆಲವು ಯೋಚನೆ ಮತ್ತು ವರ್ತನೆ ಒಂದು ಜೀವದ ಜೊತೆ ಒಂದು ಕುಟುಂಬವನ್ನೇ ಮುಳುಗಿಸಬಹುದು ಹಾಗಾಗಿ ಇಂಥವುಗಳಿಂದ ಹೊರಬರುವುದು ಅವಶ್ಯ .

ತಡೆಗಟ್ಟಲು ಹೀಗೆ ಮಾಡಬಹುದು:

ನೇರವಾಗಿ ಎಲ್ಲವನ್ನು ನಾವು ನಿಯಂತ್ರಿಸಲು ಸಾಧ್ಯವಾಗದೆ ಹೋದರೂ ನಾವು ಮಾಡುವ ಕೆಲವೊಂದು ಪುಟ್ಟ ಕೆಲಸಗಳು ಸಹ ದೊಡ್ಡ ಮಟ್ಟದಲ್ಲಿ ಉಪಯೋಗಕ್ಕೆ ಬರಬಹುದು. ಹಾಗಾಗಿ ಚಿಕ್ಕದು -ದೊಡ್ಡದು ಎಂಬ ನಿರ್ಲಕ್ಷ ಬೇಡ . ಕ್ಲಪ್ತ ಸಮಯಕ್ಕೆ ಎಲ್ಲವೂ ಯೋಗ್ಯವೇ” ಹುಲ್ಲು ಕಡ್ಡಿಯೂ ಒಮ್ಮೊಮ್ಮೆ ಆಶ್ರಯವಾಗಬಹುದು” ನೆನಪಿರಲಿ.

♦ ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿ ಯಾರ ಸಹಾಯ ಬಯಸನು. ಆದರೆ ಯಾವುದೇ ಸಹಾಯ ಬೇಡವೆಂದು ಸುಮ್ಮನಿರಬಾರದು . ಒಂದಂಶ ನೆನಪಿರಲಿ

♦ಆದಷ್ಟು ಗುಟ್ಟು ಮಾಡದೇ ಬಹಿರಂಗವಾಗಿ ಹಾಗೂ ಮುಕ್ತವಾಗಿ ಆಲೋಚನೆಗಳು ಹಾಗು ಭಾವನೆಗಳ ಕುರಿತು ಮಾತನಾಡುವಂತೆ  ಪ್ರೋತ್ಸಾಹಿಸುವುದು ಯಾವಾಗಲು ಒಳ್ಳೆಯದು .

ವ್ಯಕ್ತಿಯ ಮನಸ್ಸು ನಿಯಂತ್ರಣದಲ್ಲಿ ಇಲ್ಲದೆ ಸಾವಿನ ಸುತ್ತ ಓಡಾಡುತ್ತಿರವಾಗ ವಿಷಯ ತಿಳಿದವರು ಆ ಕ್ಷಣಕ್ಕೆ ಅವರಿಗೆ ಜೀವನ ಪಾಠವೋ ಭೋದನೆಯೋ ಮಾಡುವುದಲ್ಲ, ಅವರ ಬಾಯಿ ಮುಚ್ಚಿಸಿ ಪರಿಹಾರ ಹುಡುಕಿ ಕೊಡುತ್ತೇವೆ ಎಂಬ ಆಶ್ವಾಸನೆ ತುಂಬಿದ ಕೂಡಲೇ ಅವರು ದೈರ್ಯವಂತರಾಗಿ ಹಿಂದೆ ಸರಿಯುವುದಿಲ್ಲ,  ಹಾಗಾಗಿ ನೆನಪಿಡಿ ಮೊದಲು ಅವರಿಗೆ ಮಾತನಾಡಲು ಅವಕಾಶ ಕೊಡಿ ಅವರ ಮಾತು ಕೇಳಿ ನೀವಿದ್ದೀರಿ ಮಾತು ಕೇಳಲು ಎಂಬ ನಂಬಿಕೆ ಮೂಡಿಸಿ ನಂತರ ನಿಮ್ಮ ಮಾತಿಗೆ ಅವಕಾಶ ಕೊಡಿ .

♦ ವೃತ್ತಿಪರ ಮನೋರೋಗಕ್ಕೆ ಸಂಬಂಧ ಪಟ್ಟವರ ಅಥವಾ ಮನೋರೋಗ ತಜ್ಞರ ಸಲಹೆ ,ಸಹಕಾರ ಕೇಳುವುದು ಇಲ್ಲ ಅವಶ್ಯಕ ಎನಿಸಿದ್ದಲ್ಲಿ ನೇರವಾಗಿ ಸಂಪರ್ಕಿಸುವುದು.ಯಾವುದೇ ಕೀಳರಿಮೆ ಬೇಡ, ದೇಹ ನಮ್ಮದೇ ಮನಸ್ಸು ನಮ್ಮದೇ, ನಾಳೆ ನಮ್ಮವರಿಗೆ ತೊಂದರೆ ಆದರೆ ನೋವು ನಮಗೂ ಆಗುವುದು ಹಾಗಾಗಿ ಕಾರಣ ಕೊಟ್ಟು ವೈದ್ಯಕೀಯ ನೆರವನ್ನು ದೂಷಿಸಬೇಡಿ .

ಆತ್ಮಹತ್ಯೆಯ ಯೋಚನೆ ಅಥವಾ ಯೋಜನೆ ಅಥವಾ ಈಗಾಗಲೇ ಪ್ರಯತ್ನಿಸಿದ ವ್ಯಕ್ತಿ ನಮ್ಮ ಕೈಗೆ ಸಿಗುದಿಲ್ಲ.ಹಾಗಾಗಿ ನಾವೇ ನಮ್ಮ ಸಮಯ ಅವರಿಗೆ ಕೊಟ್ಟು, ನಾವೇ ಹುಡುಕಿ ಮಾತನಾಡಿಸಬೇಕು ಮಾತನಾಡಲು ಅವಕಾಶ ಕೊಡಬೇಕು.

♦ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಗೆ ಸಹಾಯ ಮತ್ತು ಸಹಕಾರ ನೀಡುವುದು. ಉದಾಹರಣೆ ಯೋಗ,ಧ್ಯಾನ,ಓದು, ಬರಹ ಇತರ ಮನೋಉಲ್ಲಾಸ ಚಟುವಟಿಕೆಗಳು.

♦ ಇಂತಹ ವ್ಯಕ್ತಿಗಳ ಕುರಿತು ನಿಗಾ ಅಥವಾ ಜಾಗ್ರತಿ ವಹಿಸುವುದು ಜೀವಕ್ಕೆ ಅಪಾಯ ಇರುವ ವಸ್ತು ವಿಷಯಗಳಿಂದ ದೂರವಿರುವಂತೆ ನೋಡಿಕೊಳ್ಳುವುದು .ಕೆಟ್ಟ ಯೋಚನೆಗಳು ಬಂದಾಗ ಅದನ್ನು ನಿರ್ವಹಿಸುವುದರ ಕುರಿತು ಕಲಿಸಿಕೊಡುವುದು. ಅವರ ಮಾತುಗಳಿಗೆ ಹೆಚ್ಚು ಆದ್ಯತೆ ನೀಡುವುದು, ಅವರನ್ನು ಹೆಚ್ಚು ಆಲಿಸುವುದು.

ಈ ಕೆಲವು ಸುರಕ್ಷತಾ ಕ್ರಮ ಹಾಗು ಮುಂಜಾಗ್ರತೆಯಿಂದ ಅಪಾಯಗಳನ್ನು ತಡೆಗಟ್ಟಬಹುದು.

ಸಾವು ಪರಿಹಾರವಲ್ಲ, ಅಂತಿಮ ಆಯ್ಕೆ ಅಲ್ಲ, ಸುದೀರ್ಘ ರಾತ್ರಿ ಎಂಬ ಕತ್ತಲ ದಾಟಿದರೆ, ಹಗಲು ಎಂಬ ಬೆಳಕು ಬರುವಂತೆ” ಜೀವನದ ಬಂಡಿಯಲ್ಲಿ ಹಗಲು- ಇರುಳು ದಿನವೂ ಬರುತ್ತದೆ. ಕತ್ತಲು ಮತ್ತು ಬೆಳಕು ಎರಡನ್ನೂ ಪ್ರೀತಿಸುತ್ತಾ ಮುಂದೆ ಸಾಗೋಣ.

 

(ಮಂಜುಳಾ. ಜಿ. ತೆಕ್ಕಟ್ಟೆ, ಉಪನ್ಯಾಸಕರು. ಆಪ್ತ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ)