ಉಡುಪಿ: ಆಯುರ್ವೇದ ಕೇವಲ ಒಂದು ವೈದ್ಯಕೀಯ ಪದ್ಧತಿಯಲ್ಲ, ಅದು ಜೀವನ ಶೈಲಿ, ನಮ್ಮ ಬದುಕಿನ ಅವಿಭಾಜ್ಯ ಅಂಗ. ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ ಮುಂತಾದ ಚಿಕಿತ್ಸಾ ಪದ್ದತಿಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ನಾಳಿನ ಬದುಕು ಬಹಳ ಸುಂದರವಾಗಿರುತ್ತದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ ಉಡುಪಿ ಜಿಲ್ಲೆ ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿಯಲ್ಲಿ ಬ್ರಹ್ಮಗಿರಿಯ ಬಾಲಭವನದಲ್ಲಿ ನಡೆದ ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ ಘೋಷ ವಾಕ್ಯದೊಂದಿಗೆ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧನ್ವಂತರಿ ದಿನಾಚರಣೆಯನ್ನು ನಾವು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ ಧನ್ವಂತರಿ ಮತ್ತು ಆಯುರ್ವೇದ ಈ ದೇಶದ ಸ್ವತ್ತು. ನಮ್ಮ ಋಷಿ-ಮುನಿಗಳ ಅನುಭವ ಮತ್ತು ತಪಸ್ಸಿನ ಫಲ. ಇಂದು ಎಲ್ಲ ವರ್ಗ ಮತ್ತು ಸಮುದಾಯದ ಜನರು ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ಹೊಂದುತ್ತಿದ್ದಾರೆ. ಆಯುರ್ವೇದ ಅಥವಾ ಪ್ರಾಕೃತಿಕ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಪ್ರಚಾರ ದೊರಕಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದ ಅವರು ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಅನಾವಶ್ಯಕವಾಗಿ ಮಾತ್ರ ನುಂಗುವ ಬದಲಿಗೆ ಆಯುರ್ವೇದ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ರೋಗವನ್ನು ಬುಡಸಮೇತ ನಿರ್ಮೂಲನೆ ಮಾಡಬಹುದು. ಆರೋಗ್ಯವಂತರಾಗಿ ನೂರು ವರ್ಷ ಬದುಕುವ ಆಸೆ ಎಲ್ಲರಿಗೂ ಇರುತ್ತದೆ. ಈ ನಿಟ್ಟಿನಲ್ಲಿ ಆಯುರ್ವೇದ ಚಿಕಿತ್ಸೆ ಸಹಕಾರಿಯಾಗಿದೆ ಎಂದರು.
ಕ್ಯಾನ್ಸರ್ ನಂತಹ ಮಾರಕ ರೋಗಗಳ ಚಿಕಿತ್ಸೆಯಲ್ಲಿಯೂ ಆಯುರ್ವೇದ ಪದ್ಧತಿ ಪರಿಣಾಮಕಾರಿಯಾಗಿದೆ. ದೈನಂದಿನ ಜೀವನದಲ್ಲಿ ಮಾತ್ರೆ, ಸ್ಟೀರಾಯ್ಡ್ ಗಳ ಬಳಕೆಯನ್ನು ಕಡಿಮೆ ಮಾಡಿ ಪ್ರಾಕೃತಿಕ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು. ಅಲೋಪಥಿ ಪದ್ಧತಿಯೂ ಬೇಕು ತುರ್ತು ಸಂದರ್ಭಗಳಲ್ಲಿ ವ್ಯಕ್ತಿಯ ಪ್ರಾಣ ಉಳಿಸಲು ಅಲೋಪಥಿ ಚಿಕಿತ್ಸೆ ಅಗತ್ಯ ಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಮಾತನಾಡಿ ನಮ್ಮ ಹಿರಿಯರ ಕಾಲದಲ್ಲಿ ಒಂದೊಂದು ಗ್ರಾಮದಲ್ಲಿ ಕನಿಷ್ಠ ಒಬ್ಬರಾದರೂ ಆಯುರ್ವೇದ ಪಂಡಿತರು ಇರುತ್ತಿದ್ದರು. ಪ್ರತಿಯೊಬ್ಬರ ಅಡುಗೆ ಕೋಣೆಯಲ್ಲಿಯೇ ಮನೆಮದ್ದು ತಯಾರಾಗುತ್ತಿದ್ದ ಕಾಲವಿತ್ತು. ನಂತರದ ದಿನಗಳಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯಿಂದಾಗಿ ತಕ್ಷಣದ ಪರಿಹಾರಕ್ಕೆ ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ರೂಢಿಯಾಯಿತು. ಆದರೆ ಈಗ ಮತ್ತೊಮ್ಮೆ ಆಯುರ್ವೇದ ಚಿಕಿತ್ಸಾ ಕ್ರಮದ ಮಹತ್ವ ಎಲ್ಲರಿಗೂ ಅರಿವಾಗಿದೆ. ಆಯುರ್ವೇದ ಶಾಶ್ವತ ಎನ್ನುವುದನ್ನು ಇದು ತೋರಿಸುತ್ತದೆ. ತಳಮಟ್ಟದಲ್ಲಿ ಕೆಲಸ ಮಾಡುವ ಆಶಾಕಾರ್ಯಕರ್ತೆಯರು ಕಾರ್ಯಕ್ರಮದಿಂದ ಪಡೆದ ಮಾಹಿತಿಯನ್ನು ಜನರಿಗೆ ತಲುಪಿಸಿದಾಗ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಶ್ರೀಧರ ಬಾಯರಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಮಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಸಂಘದ ಅಧ್ಯಕ್ಷೆ ಡಾ. ಹೇಮಲತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಡಾ. ವಿನಯ, ಡಾ. ಮಾನಸ ಪ್ರಾರ್ಥಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಸರ್ವೋತ್ತಮ ಶೆಟ್ಟಿ ನಿರೂಪಿಸಿ, ಡಾ. ಪ್ರದೀಪ್ ಆರ್ ಶೆಟ್ಟಿ ವಂದಿಸಿದರು.















