ಉಡುಪಿ: ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಅಪರೇಟಿವ್ ಬ್ಯಾಂಕಿನಲ್ಲಿ ಎ.ಟಿ.ಎಂ. ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳ ಸೇವೆಯು ಇತ್ತೀಚಿಗೆ ಪ್ರಾರಂಭಗೊಂಡಿತು.
ಎಲೈಸಿಯ ಉಡುಪಿ ವಿಭಾಗೀಯ ಕಛೇರಿಯ ಹಿರಿಯ ವಿಭಾಗಾಧಿಕಾರಿ ರಾಜೇಶ್ ವಿ. ಮುದೋಳ್ ಎ.ಟಿ.ಎಂ ಅನ್ನು ಉದ್ಘಾಟಿಸಿ, ರುಪೇ ಕಾರ್ಡ್ ಬಿಡುಗಡೆಗೊಳಿಸಿ 61 ವರ್ಷಗಳ ಯಶಸ್ವಿ ಗ್ರಾಹಕ ಸೇವೆಯನ್ನು ಪೂರೈಸಿದ ಬ್ಯಾಂಕಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಎ.ಟಿ.ಎಂ ಮತ್ತು ವಿವಿಧ ಡಿಜಿಟಲ್ ಸೌಲಭ್ಯಗಳು ಎಲ್ಲಾ ಗ್ರಾಹಕರಿಗೂ ತಲುಪುವಂತಾಗಲಿ ಹಾಗೂ ಮುಂದಿನ ದಿನಗಳಲ್ಲಿ ಬ್ಯಾಂಕು ಜನಸೇವೆ ನೀಡಿ ಅಭಿವೃದ್ಧಿ ಹೊಂದುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಬಿಜು ಜೋಸೆಫ್, ಮಾರುಕಟ್ಟೆ ಪ್ರಬಂಧಕರು, ಎಲ್.ಐ.ಸಿ ವಿಭಾಗೀಯ ಕಛೇರಿ, ಉಡುಪಿ ಇವರು ಬ್ಯಾಂಕಿನ ಐ.ಎಂ.ಪಿ.ಎಸ್. ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿ ಸಹಕಾರಿ ಬ್ಯಾಂಕುಗಳು ಗ್ರಾಹಕ ಸೇವೆಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಈ ದಿಸೆಯಲ್ಲಿ ಲಿಕೋಬ್ಯಾಂಕು ಆಧುನಿಕ ತಂತ್ರಜ್ಞಾನದೊಂದಿಗೆ ಮುಂದಿನ ದಿನಗಳಲ್ಲಿ ಗ್ರಾಹಕ ಸೇವೆಯಲ್ಲಿ ಇನ್ನಷ್ಟು ಸಾಧನೆಗೈದು ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಯು.ಪಿ.ಐ, ಕಾರ್ಡುಗಳಿಗೆ ಚಾಲನೆ ನೀಡಿದ ಪುರಂದರ್, ವಿಕ್ರಯ ಅಧಿಕಾರಿ, ಎಲ್.ಐ.ಸಿ. ಉಡುಪಿ ವಿಭಾಗ ಇವರು ಮಾತನಾಡಿ ಇಂದು ಬ್ಯಾಂಕಿನ ಎಲ್ಲ ಕನಸುಗಳು ನನಸಾಗಿದೆ ಎನ್ನುತ್ತಾ ಉತ್ತಮ ಸೇವೆಯನ್ನು ನೀಡಿದ ಬ್ಯಾಂಕಿನ ಸಿಬ್ಬಂದಿಗಳನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಅಧ್ಯಕ್ಷ ಕೆ. ಕೃಷ್ಣ, ಬ್ಯಾಂಕಿನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಬ್ಯಾಂಕಿನ ಇಂದಿನ ಸಾಧನೆಗೆ ಕಾರಣೀಭೂತರಾದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು.
ವೇದಿಕೆಯಲ್ಲಿ ಐ.ಡಿ.ಬಿ.ಐ. ಬ್ಯಾಂಕಿನ ಉಡುಪಿ ಶಾಖೆಯ ಮುಖ್ಯಸ್ಥ ಗಣೇಶ್ ತಿಂಗಳಾಯ, ಎಲ್.ಐ.ಸಿ. ಎಂಪ್ಲಾಯೀಸ್ ಕೋ-ಅಪರೇಟಿವ್ ಬ್ಯಾಂಕಿನ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಪ್ರಾಸ್ತಾವಿಸಿದರು. ನಿರ್ದೇಶಕ ಕೆ. ಶಿವಪ್ರಸಾದ್ ಸ್ವಾಗತಿಸಿ, ಬ್ಯಾಂಕಿನ ಉಪಾಧ್ಯಕ್ಷ ಎ. ದಯಾನಂದ ವಂದಿಸಿದರು. ಬ್ಯಾಂಕಿನ ಅಧಿಕಾರಿ ಪೂನಂ ಕದಂ ನಿರೂಪಿಸಿದರು.