“ನಾಳೆ ಮಾತನಾಡೋಣ…!: ದೆಹಲಿ ಭೇಟಿ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ”

ಕುತೂಹಲ…ಗುಟ್ಟು ಬಿಟ್ಟು ಕೊಡದ ಸಿಎಂ… ರಾಮನಗರದಲ್ಲಿ ಡಿಕೆಶಿ ಬೆಂಬಲಿಗರ ಸಂಭ್ರಮಾಚರಣೆ!

ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿ ವಾಪಾಸಾಗಿರುವ ಸಿಎಂ ಸಿದ್ದರಾಮಯ್ಯ ಬುಧವಾರ(ಮೇ27 ) ಬೆಳಗ್ಗೆ “ನಾಳೆ ಮಾತನಾಡೋಣ…!” ಎಂಬ ಹೇಳಿಕೆ ನೀಡಿ ಮುಂದೆ ಏನಾಗಲಿದೆ ಎನ್ನುವ ಕುರಿತು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ.
ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯ ಅಂಗವಾಗಿ ನೆಹರು ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಭಾರೀ ಕುತೂಹಲದಿಂದ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳ ಎದುರು ಎದುರು ಮಾತನಾಡಿದ ಸಿಎಂ ಕೇವಲ ನೆಹರು ಅವರ ವಿಚಾರ ಪ್ರಸ್ತಾವಿಸಿದರೇ ಹೊರತು ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ರಾಜ್ಯದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವುದೇ ಗುಟ್ಟು ಬಿಟ್ಟು ಕೊಡಲು ಮುಂದಾಗಲಿಲ್ಲ ದೆಹಲಿ ಭೇಟಿಯಲ್ಲಿ ಏನಾಯಿತು ಎಂದು ಪ್ರಶ್ನಿಸಿದಾಗ “ನಾಳೆ ಮಾತನಾಡೋಣ” ಎಂದಷ್ಟೇ ಪ್ರತಿಕ್ರಿಯಿಸಿ ಮುಂದುವರಿದರು.
ನಾಳೆ ಏನಾಗಲಿದೆ? ರಾಜ್ಯಪಾಲರ ಭೇಟಿ? ಸಿಎಂ ಸಿದ್ದರಾಮಯ್ಯ ಅವರು ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಪಕ್ಷವಾಗಲಿ ಯಾವುದೇ ನಾಯಕರು ಈ ಬಗ್ಗೆ ಹೇಳಿಕೆ ನೀಡಿಲ್ಲ. ಯಾರೊಬ್ಬರೂ ರಾಜೀನಾಮೆ ನೀಡುವುದಿಲ್ಲ ಅವರು ಮುಂದುವರಿಯಲಿದ್ದಾರೆ ಎನ್ನುವ ಹೇಳಿಕೆಯನ್ನೂ ನೀಡಿಲ್ಲ. ಬೆಳಗ್ಗೆ 10.30 ರಾಜ್ಯಪಾಲರ ಭೇಟಿಗೆ ಸಮಯಾವಕಾಶ ನಿಗದಿ ಪಡಿಸಿದ್ದಾರೆ ಎಂದು ಕೇಳಲಾಗಿದೆ.
ರಾಮನಗರದಲ್ಲಿ ಸಂಭ್ರಮಾಚರಣೆ ಕಾಂಗ್ರೆಸ್ ನಲ್ಲಿ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದಂತೆ ರಾಮನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ನೂರಾರು ಮಂದಿ ರಸ್ತೆಗಿಳಿದು ಸಂಭ್ರಮಾಚರಣೆ ಮಾಡಿ ಡಿಕೆಶಿ ಅವರಿಗೆ ಜೈಕಾರ ಹಾಕಿದ್ದಾರೆ.