ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರೂ ಕೈ ಜೋಡಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪ್ರತಿಯೊಬ್ಬ್ಲರೂ ಕೈಜೋಡಿಸಬೇಕು. ಮಾದಕ ವಸ್ತುಗಳ ಮಾರಾಟ, ಬಳಕೆ ಮತ್ತಿತರ ಚಟುವಟಿಕೆಗಳು ಕಂಡುಬoದಲ್ಲಿ ಸಾರ್ವಜನಿಕರು ಮಾಹಿತಿ ಸಂಗ್ರಹಕ್ಕೆ ಅಭಿವೃದ್ಧಿಪಡಿಸಿರುವ ಕ್ಯೂಆರ್ ಕೋಡ್‌ನ ಮೂಲಕ ಮಾಹಿತಿ ಹಂಚಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ (Narco Co-ordination Center)ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಾದಕ ವಸ್ತುಗಳ ಬಳಕೆಯಿಂದ ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಆರ್ಥಿಕ ನಷ್ಟದ ಜೊತೆಗೆ ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸಲು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಪ್ರತಿಯೊಬ್ಬರೂ ಇವುಗಳಿಂದ ದೂರವಿರಬೇಕು.

ಯುವಜನರು ಇಂತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಇಂತಹವುಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಮಾದಕ ದ್ರವ್ಯ ಸೇವನೆಗೆ ಬಲಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅನಾಮಧೇಯ ಮಾಹಿತಿ ನೀಡಲು ಆರಕ್ಷಕರ ಇಲಾಖೆ ವತಿಯಿಂದ ಕ್ಯೂಆರ್ ಕೋಡ್ ಅನ್ನು ಅಭಿವೃದ್ದಿ ಪಡಿಸಲಾಗಿದೆ. ಮಾದಕ ವಸ್ತುಗಳ ಮಾರಾಟ, ಸಾಗಾಟ / ಸೇವನೆ ಕಂಡುಬoದಲ್ಲಿ ಈ ಕ್ಯೂಆರ್ ಕೋಡ್ ಅನ್ನು ಸ್ಕಾö್ಯನ್ ಮಾಡಿ ಗೌಪ್ಯವಾಗಿ ಮಾಹಿತಿ ಹಂಚಿಕೊಳ್ಳಬಹುದು. ಮಾಹಿತಿ ಹಂಚಿಕೊoಡ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದರು. ಔಷಧಿ ಅಂಗಡಿಗಳಲ್ಲಿ ಅಮಲು ಬರಿಸುವಂತಹ ಔಷಧಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಹಾಗಿಲ್ಲ.

“ವೈದ್ಯರ ನಿರ್ದೇಶನವಿಲ್ಲದೇ ಔಷಧ ಮಾರಾಟ ನಿಷೇಧ” ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಔಷಧಿ ಅಂಗಡಿಗಳ ಸಿಸಿ ಟಿವಿ ನಿರಂತರವಾಗಿ ಚಾಲನೆಯಲ್ಲಿರುವುದರ ಜೊತೆಗೆ ಸಿಸಿಟಿವಿ ಫೂಟೇಜ್‌ಗಳು ಕನಿಷ್ಠ ಮೂರು ತಿಂಗಳ ವರೆಗೆ ಸಂಗ್ರಹಣೆ ಇರುವಂತೆ ನೋಡಿಕೊಳ್ಳಬೇಕು. ಔಷಧ ನಿಯಂತ್ರಕರು ಹಾಗೂ ಪೊಲೀಸ್ ಇಲಾಖೆಯವರು ಈ ಬಗ್ಗೆ ಕ್ರಮವಹಿಸಬೇಕು ಎಂದರು.

ಶಾಲೆ-ಕಾಲೇಜು ವಸತಿ ನಿಲಯಗಳಲ್ಲಿ ರಕ್ತ ತಪಾಸಣೆ ನಡೆಸಲು ಅಧಿಕಾರಿಗಳು ಕ್ರಮವಹಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಕಡಿಮೆ ಹಾಜರಾತಿ ಹೊಂದಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರಿಗೆ ಮತ್ತು ಅವರ ಪೋಷಕರಿಗೆ ಆಪ್ತ ಸಮಾಲೋಚನೆ ನೀಡಬೇಕು. ಮೆಡಿಕಲ್ ಶಾಪ್‌ಗಳಲ್ಲಿ ಸಂದೇಹಾಸ್ಪದವಾಗಿ ಕೆಮ್ಮಿನ ಔಷಧಿ ಖರೀದಿಸುವ ಬಗ್ಗೆ ನಿಗಾ ವಹಿಸಬೇಕು ಎಂದರು.

ಮಾದಕ ದ್ರವ್ಯ ಸೇವನೆ ಮತ್ತು ಮಾರಾಟದಿಂದ ಆಗುವ ಹಾನಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೀದಿ ನಾಟಕ, ಸಂಗೀತ, ಕಲೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸಿ ಜನರಲ್ಲಿ ಅರಿವು ಮೂಡಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಗ್ರಾಮಗಳನ್ನು ತಂಬಾಕು ಮುಕ್ತವಾಗಿಸಬೇಕು.

ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೃಷಿ ಜಮೀನುಗಳು, ತೋಟಗಳು ಹಾಗೂ ಕಾಡಂಚಿನಲ್ಲಿ ಗಾಂಜಾ ಬೆಳೆಗಳನ್ನು ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ರೈಲ್ವೆ ನಿಲ್ದಾಣಗಳಲ್ಲಿ ಸಾಗಾಟದ ಬಗ್ಗೆ ಎಚ್ಚರವಹಿಸುವುದರ ಜೊತೆಗೆ ಕ್ಯೂಆರ್ ಕೋಡ್ ಬಗ್ಗೆ ರೈಲ್ವೆ ನಿಲ್ದಾಣಗಳಲ್ಲಿ ಪ್ರಚಾರ ಕೈಗೊಳ್ಳಬೇಕು ಎಂದರು.

ಮಾಹೆ ವಿಶ್ವ ವಿದ್ಯಾಲಯದ ಅಡಿಯಲ್ಲಿ 25 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವಸ್ತುಗಳ ಬಳಕೆ, ಅವುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ಕ್ಯೂ ಆರ್ ಕೋಡ್ ಗಳನ್ನು ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‌ಗಳಲ್ಲಿ ಎದ್ದುಕಾಣುವ ಜಾಗಗಳಲ್ಲಿ ಪ್ರದರ್ಶಿಸಬೇಕು ಎಂದರು.

ಜಿಲ್ಲೆಯ ಶಾಲಾ ಕಾಲೇಜು, ಬಸ್ ನಿಲ್ದಾಣ, ಸರಕಾರಿ ಕಚೇರಿಗಳು, ಸಭಾಂಗಣಗಳು, ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು, ಮೆಡಿಕಲ್ ಶಾಪ್‌ಗಳು ಸೇರಿದಂತೆ ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಎದ್ದು ಕಾಣುವ ರೀತಿಯಲ್ಲಿ ಕ್ಯೂ ಆರ್ ಕೋಡ್ ಗಳನ್ನು ಪ್ರದರ್ಶಿಸಬೇಕು ಎಂದ ಅವರು, ಕಳೆದ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದ್ದರೂ ಇದರ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿ.ಹೆಚ್.ಓ ಡಾ. ಬಸವರಾಜ್ ಹುಬ್ಬಳ್ಳಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.