ತೆಕ್ಕಟ್ಟೆಯ ಮಾಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆ

ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಚಿರತೆ ಸೆರೆ ಹಿಡಿಯಲು ಇಟ್ಟ ಬೋನಿಗೆ ಶನಿವಾರ ತಡರಾತ್ರಿ ಸುಮಾರು 10 ವರ್ಷ ಪ್ರಾಯದ ಗಂಡು ಚಿರತೆ ಬಿದ್ದಿದ್ದು ಅರಣ್ಯ ಇಲಾಖೆಯವರು ಭಾನುವಾರ ಸೆರೆ ಹಿಡಿದಿದ್ದಾರೆ.

ಮಾಲಾಡಿಯ ತೋಟವೊಂದರಲ್ಲಿ ಕಳೆದೊಂದು ತಿಂಗಳಿನಿಂದ ಚಿರತೆ ಪ್ರತ್ಯಕ್ಷವಾದ ಬೆನ್ನಲ್ಲೆ ಅರಣ್ಯ ಇಲಾಖೆಯು ಬೋನು ಇಟ್ಟಿದ್ದರು. ತೋಪಿನ ಪಕ್ಕದಲ್ಲೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ದೇವಸ್ಥಾನವಿದ್ದು ಇದು ಜನ ಸಂಚಾರದ ಸ್ಥಳವಾಗಿತ್ತು. ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಅರಣ್ಯಾಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಜನರ ಆತಂಕ ನಿವಾರಿಸಲು ಬೋನು ಇಟ್ಟಿದ್ದರು. ಅಲ್ಲದೆ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಇದೇ ತೋಟದಲ್ಲಿ ಹೆಣ್ಣು ಚಿರತೆಯೂ ಸೆರೆಯಾಗಿತ್ತು. ಕಳೆದೊಂದು ತಿಂಗಳ ಹಿಂದೆ ಬೋನು ಇಟ್ಟಿದ್ದು ನಾಯಿ ಕಟ್ಟಿದ್ದು ಭಾನುವಾರ ಬೆಳಿಗ್ಗೆ ನೋಡುವಾಗ ಚಿರತೆ ಬೋನಿನೊಳಕ್ಕೆ ಬಿದ್ದು ಬಂಧಿಯಾಗಿತ್ತು.

ಕುಂದಾಪುರ ಅರಣ್ಯ ಇಲಾಖೆಯ ವಲಯ ಸಂರಕ್ಷಣಾಧಿಕಾರಿ ಕಮಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ ಹಾಗೂ ಮಾಲತಿ, ಮಂಜು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ. ಅಂದಾಜು ಹತ್ತು ವರ್ಷ ಪ್ರಾಯದ ಬೃಹತ್ ಗಂಡು ಚಿರತೆ ಇದಾಗಿದೆ. ಸೆರೆಯಾದ ಚಿರತೆಯನ್ನು ಕಾಣಲು ಬೆಳ್ಳಂಬೆಳಿಗ್ಗೆ ನೂರಾರು ಮಂದಿ ಆಗಮಿಸಿದರು.

ಸ್ಥಳಕ್ಕೆ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷ ಶೇಖರ್ ಕಾಂಚನ್, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸದಸ್ಯರಾದ ವಿಜಯ ಭಂಡಾರಿ, ಸಂಜೀವ ದೇವಾಡಿಗ, ಸತೀಶ್ ದೇವಾಡಿಗ, ಸ್ಥಳಿಯರಾದ ಸತೀಶ್ ತೆಕ್ಕಟ್ಟೆ, ಸುರೇಂದ್ರ ತೆಕ್ಕಟ್ಟೆ,ರಮೇಶ್, ಸುರೇಶ್ ಶೆಟ್ಟಿ ಮಾಲಾಡಿ ಇದ್ದರು.