ಕೋಟ: ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

ಕೋಟ: ಡೈರಿ ಫಾರ್ಮ್ ನಲ್ಲಿ ಹುಲ್ಲು ಕಟಾವು ನಡೆಸುತ್ತಿದ್ದ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಶಿರೂರು ಮೂರ್ಕೈ ಸಮೀಪ ಹೆಗ್ಗುಂಜೆ ಗುಡ್ಡೆಯಲ್ಲಿ ಸೋಮವಾರ ಸಂಭವಿಸಿದೆ.

ಸ್ಥಳೀಯ ನಿವಾಸಿ ಕೃಷ್ಣ ನಾಯ್ಕ್ ದಾಳಿಗೊಳಗಾದವರು. ಶಿರೂರು ಮೂರ್ಕೈ ಸಮೀಪವಿರುವ ವಿಖ್ಯಾತ್‌ ಕುಮಾರ್‌ ಶೆಟ್ಟಿ ಅವರ ಡೈರಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣ ನಾಯ್ಕ್ ದನಗಳಿಗೆ ಹುಲ್ಲು ತರಲು ತೋಟಕ್ಕೆ ತೆರಳಿದ್ದರು. ಆಗ ಚಿರತೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಭಾಗದಲ್ಲಿ ಚಿರತೆ ಹಾವಳಿ ವ್ಯಾಪಕವಾಗಿದೆ. ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆದಿದ್ದು, ಇದೀಗ ಮನುಷ್ಯರ ಮೇಲೆಯೂ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.ಸಂಬಂಧಪಟ್ಟ ಇಲಾಖೆ ಈ ಕುರಿತು ಗಮನಹರಿಸಬೇಕು. ಗಾಯಾಳುವಿಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.