ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸ್ತುತ ಸ್ಥಿತಿಗತಿಗೆ ಕಾರಣವಾದ ಪ್ರಸ್ತುತ ಶಾಸಕ ರಘುಪತಿ ಭಟ್ ಅವರಿಗೆ ಆರೋಗ್ಯದ ವಿಚಾರದಲ್ಲಿ ಇರುವ ಕಾಳಜಿಯನ್ನು ಏನು ಎನ್ನುವುದನ್ನು ಎದ್ದು ತೋರಿಸುತ್ತದೆ. ಅವರ ದಿವ್ಯ ನಿರ್ಲಕ್ಷ್ಯದ ಪರಿಣಾಮ ಇಂದು ಅಲ್ಲಿನ ಸಿಬ್ಬಂದಿಗಳು ಕಷ್ಟ ಪಡುವಂತಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಡಿಯೋನ್ ಡಿಸೋಜಾ ಆರೋಪಿಸಿದ್ದಾರೆ.
ಜಿಲ್ಲೆಯ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಉತ್ತಮ ಆರೋಗ್ಯ ಸವಲತ್ತುಗಳು ಸಿಗಬೇಕು ಎಂಬ ಕನಸನ್ನು ಇಟ್ಟುಕೊಂಡು ಹಿಂದಿನ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಆಸ್ಪತ್ರೆ ಇಂದು ರಾಜಕೀಯ ಆಟಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಪ್ರಸ್ತುತ ಸರಕಾರ ಆರೋಗ್ಯ ಕಾರ್ಯಕರ್ತರನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಇದಾಗಿದೆ.
ಕೋವಿಡ್ ಸಮಯದಲ್ಲಿ ಅವರುಗಳು ನೀಡಿದ ಅಪರಿಮಿತಿ ಸೇವೆಯನ್ನು ಸರಕಾರ ಮರೆತಂತಿದೆ. ಉಡುಪಿಯ ಶಾಸಕರು ವಸ್ತ್ರ ಸಂಹಿತೆಯ ವಿಚಾರವನ್ನು ಎತ್ತಿಕೊಂಡು ಶಾಂತಿಯನ್ನು ಹಾಳು ಮಾಡುವ ವಿಚಾರದಲ್ಲಿ ಮಗ್ನರಾಗಿದ್ದಾರೆ ವಿನಹ ಆರೋಗ್ಯ ಕಾರ್ಯಕರ್ತರ ನೋವುಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದರೂ ಕೂಡ ಶಾಸಕರು ದಿವ್ಯ ಮೌನವನ್ನು ವಹಿಸಿದ್ದು ನಾಚಿಕೇಗೇಡಿನ ಸಂಗತಿಯಾಗಿದೆ.
15000 ಕ್ಕೂ ಅಧಿಕ ಹೆರಿಗೆಗಳನ್ನು ಮಾಡುವ ಉತ್ತಮ ಸೇವೆಯನ್ನು ನೀಡಿರುವ ಆಸ್ಪತ್ರೆಯ ಸಿಬ್ಬಂದಿಗಳ ವೇತನವನ್ನು ತಡೆಹಿಡಿದಿರುವುದು ನಿರ್ಲಕ್ಷ್ಯ ಮತ್ತು ಅಮಾನವೀಯ ವರ್ತನೆಯಾಗಿದ್ದು ಜಿಲ್ಲಾ ಯುವ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಖಂಡಿಸುತ್ತದೆ.
ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನವನ್ನು ಪಾವತಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.