ಮೂರು ತಿಂಗಳೊಳಗೆ ಕ್ರಷರ್ ಹಾಗೂ ಕ್ವಾರಿಗಳಿಗಿರುವ ಕಾನೂನು ತೊಡಕುಗಳನ್ನು ಬಗೆಹರಿಸಲಾಗುವುದು: ರವೀಂದ್ರ ಶೆಟ್ಟಿ ಬಜಗೋಳಿ ಭರವಸೆ

ಕಾರ್ಕಳ: ಯಾವುದೇ ಕ್ರಷರ್ ಗಳು ಅಕ್ರಮವಾಗಿಲ್ಲ, ಸರಕಾರದ ಕಾನೂನು ನಿಯಾಮವಳಿಗಳಲ್ಲಿ ಲೋಪವಿದೆ. ಕ್ರಷರ್ ಗಣಿಗಾರಿಕೆಗಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಉದ್ಯಮ ಸ್ನೇಹಿ ಯಾಗಿಸುವ ಕಾರ್ಯಕ್ಕೆ ನಾವು ಬದ್ಧ ಎಂದು ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಕಾರ್ಕಳ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚ್ಚಾವಸ್ತುಗಳಾದ ಜಲ್ಲಿ ಮರಳು ಕಲ್ಲುಗಳನ್ನು ವಿವಿಧ ಕೈಗಾರಿಕೆ, ಕಟ್ಟಡಗಳಿಗೆ ಪೂರೈಸುವ, ಕ್ವಾರಿ ಉದ್ಯಮವು ಲಕ್ಷಾಂತರ ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗವನ್ನು ನೀಡಿವೆ. ಆದರೆ ಸರಕಾರದ ಕೆಲವು ಅಸಮರ್ಪಕವಾದ ಕಾನೂನುಗಳಿಂದ ಕಚ್ಚಾವಸ್ತುಗಳ ಸಾಗಾಣಿಕೆ ಹಾಗೂ ಕಲ್ಲುಗಣಿಗಾರಿಕೆಗಳಿಗೆ ತೊಂದರೆಯಾಗುತ್ತಿದ್ದು, ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರಿಗೂ ಇದರಿಂದ ಸಮಸ್ಯೆಯಾಗಿದೆ. ಅದಕ್ಕಾಗಿ ಸರಕಾರ ಕಾನೂನು ತೊಡಕುಗಳನ್ನು ನಿವಾರಿಸಿ ಕಚ್ಚಾವಸ್ತುಗಳನ್ನು ಪೂರೈಸಲು ಅನುವು ಮಾಡಲು ಸರಕಾರ ಯೋಗ್ಯ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ಎಲ್ಲ ಗುತ್ತಿಗೆದಾರರು ಎಲ್ಲಾ ವಲಯದ ಕ್ರಷರ್ ಗಳಿಂದ ಪೂರೈಕೆಯಾಗುವ ಕಚ್ಚಾವಸ್ತುಗಳನ್ನು ಪೂರೈಸುವ ಕೈಗಾರಿಕೆಗಳು ತನ್ನ ಚೌಕಟ್ಟಿನೊಳಗೆ ಕಾನೂನು ಸ್ನೇಹಿಯಾಗಿ ಗಣಿಗಾರಿಕೆ ಮಾಡಿದಲ್ಲಿ ಸರಕಾರಕ್ಕೆ ಸಂದಾಯವಾಗುವ ರಾಜಸ್ವವು ಹೆಚ್ಚುತ್ತದೆ. ಕ್ವಾರಿ ಕ್ರಷರ್ ಉದ್ಯಮದ ಬೇಡಿಕೆ ಏನೆಂದರೆ ಕಾನೂನು ಚೌಕಟ್ಟಿನೊಳಗೆ ಉದ್ಯಮ ನಡೆಸಲು ಅವಕಾಶ ಕೊಡಿ, ಎಲ್ಲರೂ ಕಾನೂನು ಬದ್ದವಾಗಿ ಉದ್ಯಮ ನಡೆಸಲು ತಯಾರಿದ್ದಾರೆ. ಅದಕ್ಕೆ ಪೂರಕವಾದ ನಿಯಮಗಳಿಲ್ಲ. ಆದ್ದರಿಂದ ಗಣಿಗಾರಿಕೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ಮಾಡುತಿದ್ದಾರೆ ಎಂದು ಆರೋಪ ಹೋರಿಸುವುದು ಸರಿಯಲ್ಲ. ಆದರೆ ಸರಕಾರದ ಕಾನೂನಿನಲ್ಲಿ ಸಮಸ್ಯೆ ಇದೆ. ಆದ್ದರಿಂದ ಮುಂದಿನ ಮೂರು ತಿಂಗಳ ಒಳಗೆ ಕ್ರಷರ್ ಹಾಗೂ ಕ್ವಾರಿಗಳಿಗಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದರು.