ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಅ.31 ರಿಂದ ನ. 13 ರ ವರೆಗೆ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನ

ಉಡುಪಿ: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆನಪಿಗಾಗಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು
ಮಟ್ಟದಲ್ಲಿ , ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಅಕ್ಟೋಬರ್ 31 ರಿಂದ ನವೆಂಬರ್ 13 ರ ವರೆಗೆ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರಿಕರ ಸಬಲೀಕರಣ NALSA Campaigns on “Empowerment of Citizens through Legal Awareness and Out reach’ and Haq_hamara_bhi_to_hai @ 75” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

2 ವಾರಗಳ ಈ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳನ್ನು ತಲುಪುವ ಮತ್ತು ಪ್ರತಿಯೊಂದು ಉಪವಿಭಾಗದಲ್ಲಿ ಒಮ್ಮೆಯಾದರೂ ಕನಿಷ್ಟ ಒಂದು ಕಾರ್ಯಕ್ರಮವನ್ನು ವಕೀಲರು, ಅರೆಕಾಲಿಕ ಕಾನೂನು ಸ್ವಯಂ ಸೇವಕರು, ಕಾನೂನು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸರು, ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಜಿಲ್ಲೆಯ ಗ್ರಾಮೀಣ, ಬುಡಕಟ್ಟು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವ ಬಗ್ಗೆ ಜಾಗೃತಿ ಹಾಗೂ ಪ್ರಚಾರದ ಚಟುವಟಿಕೆಗಳನ್ನು ಆಯೋಜಿಸುವ ಗುರಿಯನ್ನು ಹೊಂದಲಾಗಿದೆ. ಒಟ್ಟಾರೆಯಾಗಿ ಕಾನೂನು ಸೇವೆಗಳ ಉದ್ದೇಶವನ್ನು ಬಲಪಡಿಸುವುದು ಮತ್ತು ಕಾನೂನು ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿರುತ್ತದೆ.

ಅ. 31 ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿರುವ ಜಾಗೃತಿ ಅರಿವು ಸಪ್ತಾಹ 2022 ಮತ್ತು ಮಾನವ ಕಳ್ಳ ಸಾಗಣೆಯ ವಿರುದ್ದ ಜನ ಜಾಗೃತಿ ಅಭಿಯಾನದ ಸಂಬಂಧ ಬೋರ್ಡ್ ಹೈಸ್ಕೂಲ್‌ನಿಂದ ಬೈಕ್ ರ‍್ಯಾಲಿ ನಡೆಸುವ ಮೂಲಕ ಅಭಿಯಾನವನ್ನು ಉದ್ಘಾಟಿಸಲಾಗುವುದು. ದೇಶದ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಭಿಯಾನವು 13ನೇ ನವೆಂಬರ್ 2022 ರಂದು ಮುಕ್ತಾಯಗೊಳ್ಳಲಿದೆ. ಅಭಿಯಾನವನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಗೊಳಿಸುವಲ್ಲಿ ಜಿಲ್ಲೆಯ ನಾಗರಿಕರು ಸಹಕರಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.