ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಆಗಿರುವ ಫಲಾನುಭವಿಗಳಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ವೃತ್ತಿಯಲ್ಲಿ ತೊಡಗದೆ ಇರುವ ಪುರುಷ ಮತ್ತು ಮಹಿಳೆಯರು ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ನೋಂದಣಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದ್ದು, ಇದನ್ನು ಪರಿಶೀಲಿಸಿ ಅನರ್ಹರೆಂದು ಪತ್ತೆಹಚ್ಚಿ ರದ್ದುಗೊಳಿಸಲಾಗುತ್ತಿದೆ.
ಅನರ್ಹರು ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಕೂಡಲೇ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹಿಂದಿರುಗಿಸಿ ಸದಸ್ಯತ್ವವನ್ನು ರದ್ದುಗೊಳಿಸಿಕೊಳ್ಳಬೇಕು ಹಾಗೂ ಕಾಯ್ದೆಯಡಿಯಲ್ಲಿ ಬರುವ ಕಟ್ಟಡ ಮತ್ತು ಇತರೆ ನಿರ್ಮಾಣದ ವೃತ್ತಿಯನ್ನು ಬಿಟ್ಟು ಅನ್ಯ ವೃತ್ತಿ ಮಾಡುತ್ತಿರುವವರು ಸುಳ್ಳು ದಾಖಲಾತಿಗಳೊಂದಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಬಾರದು. ಇದನ್ನು ಮೀರಿ ಅರ್ಜಿ ಸಲ್ಲಿಸಿ ಸರ್ಕಾರಕ್ಕೆ ಮೋಸ ಮಾಡಿ ಸೌಲಭ್ಯ ಪಡೆದಲ್ಲಿ ಮತ್ತು ಅನರ್ಹರಿಗೆ ಉದ್ಯೋಗ ಪ್ರಮಾಣ ಪತ್ರವನ್ನು ನೀಡುವ ವ್ಯಕ್ತಿ, ಸಂಸ್ಥೆ ಹಾಗೂ ಸಂಘಟಣೆಗಳಿಗೂ ಕೂಡ ಭಾರತೀಯ ದಂಡ ಸಂಹಿತೆ ಪ್ರಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.