ಉಡುಪಿ ಮೇ 21: ವಸತಿ ಹಾಗೂ ಬಹುಮಹಡಿ ವಸತಿ ಸಮುಚ್ಛಯಗಳು ಕೊಳಚೆ ಹಾಗೂ ತ್ಯಾಜ್ಯ ನೀರುಗಳನ್ನು ಶುದ್ದೀಕರಣ ನಿರ್ವಹಣೆ ಮಾಡದೇ ತೋಡುಗಳ ಮೂಲಕ ನದಿಗೆ ಬಿಟ್ಟು ಜಲಮಾಲಿನ್ಯ ಉಂಟುಮಾಡಿದರೆ ಅಂತಹ ವಸತಿ
ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಲತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಛಯಗಳು, ತ್ಯಾಜ್ಯ ನಿರ್ವಹಣಾ ಘಟಕಗಳ ಇರುವಿಕೆ, ಅವುಗಳ ನಿರ್ವಹಣೆ,
ತ್ಯಾಜ್ಯ ನಿರ್ವಹಣಾ ಘಟಕ ಇಲ್ಲದೇ ಇರುವುದು, ಕಲುಷಿತ ನೀರುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದೇ ತೋಡುಗಳಿಗೆ ಬಿಟ್ಟು ಇಂದ್ರಾಳಿ ನದಿ ಮೂಲಗಳಿಗೆ ಬಿಡುವುದರ ಬಗ್ಗೆ ಸವಿಸ್ತಾರವಾದ ಸರ್ವೇ ಕಾರ್ಯಗಳನ್ನು ಎಂ.ಐ.ಟಿ ಸಂಸ್ಥೆಯ ವತಿಯಿಂದ ಕೈಗೊಂಡಿದ್ದು, ಕೆಲವು ವಸತಿ ಹಾಗೂ ಸಮುಚ್ಛಯಗಳು ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ಡ್ರೋನ್ ಸರ್ವೇಗಳಲ್ಲಿ ಕಂಡುಬoದಿದೆ. ಇವುಗಳ ಬಗ್ಗೆ ಮಾಲೀಕರು ಎಚ್ಚರ ವಹಿಸಬೇಕು. ತಪ್ಪಿದ್ದಲ್ಲಿ ಅಂತಹವರ ವಿರುದ್ಧ ದಂಡ ವಿಧಿಸಲಾಗುವುದು ಎಂದರು.
ನಗರಸಭಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕಗಳು ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಇವೆ.
ಆದರೂ ಅವುಗಳನ್ನು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೆಲವು ಅಪಾರ್ಟ್ಮೆಂಟ್ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡು ಬಂದಿದೆ. ತ್ಯಾಜ್ಯ ನೀರು ನೇರವಾಗಿ ಜಲ ಮೂಲಗಳಲ್ಲಿ ಸೇರಿ ಸಂಪೂರ್ಣ ಕಲ್ಮಶವಾಗುತ್ತದೆ ಎಂದ ಅವರು, ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧಿಕರಿಸಿ ಅವುಗಳನ್ನು ಗಾರ್ಡನ್ ಸೇರಿದಂತೆ ಮತ್ತಿತರಗಳಿಗೆ ಮರುಬಳಕೆ ಮುಂದಾಗಬೇಕು ಎಂದರು.
ಪ್ರಸ್ತುತ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸೇಫ್ಟಿ ಟ್ಯಾಂಕ್ ಗಳ ಬಳಕೆ ಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು.
ಸಕ್ಕಿಂಗ್ ಯಂತ್ರಗಳ ಬಳಕೆಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು ಎಂದ ಅವರು, ತ್ಯಾಜ್ಯ ನೀರನ್ನು ನದಿ ತೋಡುಗಳಿಗೆ ಬಿಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಇವುಗಳಿಂದ ಕೆಲ ಬಾವಿಗಳ ನೀರು ಸಹ ಕಲುಷಿತಗೊಳ್ಳುತ್ತಿದೆ ಹಾಗೂ ನದಿಯ ನೀರು ಸಹ ಮಾಲಿನ್ಯವಾಗುತ್ತಿದೆ. ಹೀಗಾಗದಂತೆ ಎಚ್ಚರ ವಹಿಸಬೇಕಿದೆ ಎಂದರು.
ಇಂದ್ರಾಳಿ ನದಿಯು ಉಗಮ ಸ್ಥಾನದಿಂದ ಸಮುದ್ರ ಸೇರುವೆವರೆಗೆ ವಿವಿಧ ಹಂತಗಳ ಸ್ಟೆಚ್ ಮಾಡುವುದರೊಂದಿಗೆ ಅವುಗಳ
ನಿರ್ವಹಣೆ, ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳಲು ಕಟ್ಟಡ ನಿರ್ಮಾಣ ಸಂಸ್ಥೆಗಳು, ಎನ್.ಜಿ.ಓ ಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ನಗರ ಸಭೆಗೆ ವಹಿಸಿ, ನದಿ ದಂಡೆಗಳ ಸ್ವಚ್ಛತೆಗೆ, ಕಲುಷಿತ ಹಾಗೂ ತ್ಯಾಜ್ಯ ನೀರು ಸೇರಿ ಮಾಲಿನ್ಯವಾಗದಂತೆ ಕ್ರಮವಹಿಸುವುದರಿಂದ ನದಿ ನೀರು ಶುದ್ಧವಾಗಿರುತ್ತದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಫಿಲ್ಟರ್ ಮಾಡಿ ಬಳಸಿಕೊಳ್ಳಬಹುದಾಗಿದೆ ಎಂದರು.
ಸಮುದಾಯದವರು ನಮ್ಮ ನಗರವನ್ನು ಸ್ವಚ್ಛ ವಾಗಿರಿಸಿಕೊಳ್ಳಬೇಕೆಂಬ ಮನೋಭಾವವನ್ನು ಹೊಂದುವುದರೊoದಿಗೆ
ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ವಸತಿ ಸಮುಚ್ಚಯಗಳು ತ್ಯಾಜ್ಯ ನೀರಿನ ಶುದ್ಧಿಕರಣ ಘಟಕಗಳನ್ನು ನಿರ್ವಹಿಸುವುದರೊಂದಿಗೆ ಜಲಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್
ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಾಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಂ.ಐ.ಟಿ ಅಸೋಸಿಯೇಟ್ ಡೈರೆಕ್ಟರ್ ಡಾ. ರಾಘವೇಂದ್ರ ಹೊಳ್ಳ, ಶಿಲ್ಪಾ ಭಟ್ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















