ಕೊಚ್ಚಿ: ಶಿಶುವಿಹಾರದ ವಿದ್ಯಾರ್ಥಿನಿಯೊಬ್ಬಳು ತನ್ನ ಜನ್ಮದಿನದಂದು ಶಾಲಾ ಬಸ್ನಲ್ಲಿ ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಕತಾರ್ನಿಂದ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಮಿನ್ಸಾ ಮರಿಯಮ್ ಜಾಕೋಬ್ ರಾಜಧಾನಿ ದೋಹಾದ ಹೊರವಲಯದಲ್ಲಿರುವ ಅಲ್ ವಕ್ರಾ ಪಟ್ಟಣದ ಸ್ಪ್ರಿಂಗ್ಫೀಲ್ಡ್ ಶಿಶುವಿಹಾರದ ವಿದ್ಯಾರ್ಥಿಯಾಗಿದ್ದಳು.
ತೆರೆದ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಶಾಲಾ ಬಸ್ಸಿನೊಳಗೆ ಮಿನ್ಸಾ ನಿದ್ದೆಗೆ ಜಾರಿದ್ದಳು. ಸುಮಾರು ನಾಲ್ಕು ಗಂಟೆಗಳ ನಂತರ ಬಸ್ಸಿಗೆ ವಾಪಾಸಾದಾಗ ಬಸ್ ಚಾಲಕ ಮತ್ತು ವಾಹನ ಪರಿಚಾರಕರು ಬಾಲಕಿಯನ್ನು ಗಮನಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಬದುಕಿಸಲಾಗಲಿಲ್ಲ.
ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ನೊಂದಿಗೆ ಮಾತನಾಡಿದ ಕುಟುಂಬದ ಸಂಬಂಧಿಯೊಬ್ಬರು, ಮಿನ್ಸಾ ಭಾನುವಾರ ಶಾಲಾ ಬಸ್ನಲ್ಲಿ ಶಾಲೆಗೆ ಹೋಗಿದ್ದಳು ಮತ್ತು ಆಕೆ ಅಲ್ಲೇ ನಿದ್ರೆಗೆ ಜಾರಿದ್ದಳು ಎಂದು ತಿಳಿಸಿದರು. ವಾತಾಯನ ಇಲ್ಲದೇ ತೆರೆದ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನದೊಳಗೆ ಆಕೆ ಸಿಲುಕಿಕೊಂಡಿದ್ದಳು. ಘಟನೆ ಸಂಭವಿಸಿದಾಗ ಅಲ್ ವಕ್ರಾದಲ್ಲಿ ತಾಪಮಾನವು 43 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಗಾಳಿ ಇಲ್ಲದೆ ಉಸಿರುಗಟ್ಟಿದ್ದರಿಂದ ಬಾಲಕಿ ಸಾವಿಗೀಡಾಗಿದ್ದಾಳೆ.
ಮಿನ್ಸಾ ಮೂಲತಃ ಕೇರಳದವರಾದ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ ಕಿರಿಯ ಮಗಳು. ತಾಯಿ ಸೌಮ್ಯಾ ಕತಾರ್ ವಿಶ್ವಕಪ್ ಸಮಿತಿಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ ಆಗಿದ್ದಾರೆ.
ಕತಾರ್ನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯವು ಘಟನೆಯ ಕುರಿತು “ಸಮರ್ಥ ಅಧಿಕಾರಿಗಳಿಂದ” ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಸಾವಿನ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯು ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವುದಾಗಿ ಹೇಳಿದೆ.
ಸಚಿವಾಲಯವು ನಡೆಸಿದ ತನಿಖೆಯಲ್ಲಿ ಶಾಲಾ ಸಿಬ್ಬಂದಿ ಸರಿಯಾದ ಶಿಷ್ಟಾಚಾರಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಶಿಶುವಿಹಾರವನ್ನು ಮುಚ್ಚಲು ಆದೇಶ ನೀಡುವುದರ ಜೊತೆಗೆ, ಕರ್ತವ್ಯಲೋಪ ಎಸಗಿದ ಶಾಲಾ ಬಸ್ ನೌಕರರ ವಿರುದ್ಧ ಕಠಿಣ ಕ್ರಮವನ್ನು ಸಚಿವಾಲಯ ಕೋರಿದೆ. ಮೂವರು ಬಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಮಿನ್ಸಾ ಪಾರ್ಥಿವ ಶರೀರವು ಕತಾರ್ ಏರ್ವೇಸ್ ವಿಮಾನದಲ್ಲಿ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 8.45 ಕ್ಕೆ ಆಗಮಿಸಿತು. ಕೊಟ್ಟಾಯಂನ ಚಿಂಗವನಂನಲ್ಲಿರುವ ಕುಟುಂಬದ ನಿವಾಸದಲ್ಲಿ ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.ಮಗುವಿಗೆ ಶ್ರದ್ಧಾಂಜಲಿ ಅರ್ಪಿಸಲು ಶವಾಗಾರದ ಹೊರಗೆ ಅಪಾರ ಜನಸ್ತೋಮ ನೆರೆದಿತ್ತು ಎಂದು ಮನೋರಮಾ ವರದಿ ಮಾಡಿದೆ.
ಚಿತ್ರ: ಇಂಟರ್ನೆಟ್












