ಬಾಕ್ಸ್ ಆಫೀಸ್ ಸೂರೆಹೊಡಿಯುತ್ತಿರುವ ಪ್ರಭಾಸ್ ‘ಸಲಾರ್’: ಬಾಹುಬಲಿ ಅಬ್ಬರದೆದುರು ಮಂಕಾದ ಶಾರೂಖ್ ಖಾನ್ ‘ಡಂಕಿ’

ಹೊಂಬಾಳೆ ಫಿಲ್ಂಸ್ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರದ ಹುಚ್ಚು ಗಗನಕ್ಕೇರುತ್ತಿದೆ. ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಅಷ್ಟೇ ಅಲ್ಲ, ಮೊದಲ ದಿನದಿಂದಲೂ ಈ ಚಿತ್ರ ಹೊಸ ದಾಖಲೆಗಳನ್ನು ಮಾಡುತ್ತಿದೆ. ವಾರಾಂತ್ಯದಲ್ಲೂ ಪ್ರಭಾಸ್ ನ ಸಲಾರ್ ಸಂಚಲನ ಮೂಡಿಸಿದೆ.

ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ‘ಸಲಾರ್’ ಸಿನಿಮಾದ ಗಳಿಕೆಯ ವೇಗ ಬುಲೆಟ್ ಗಿಂತಲೂ ಹೆಚ್ಚಾಗಿದೆ. 90 ಕೋಟಿಗೂ ಅಧಿಕ ಮೊತ್ತದ ಗ್ರ್ಯಾಂಡ್ ಓಪನಿಂಗ್ ಪಡೆದಿರುವ ಈ ಚಿತ್ರ ವರ್ಷದ ದೊಡ್ಡ ಓಪನರ್ ಎಂಬ ದಾಖಲೆ ಮಾಡಿದೆ. ಚಿತ್ರ ಬಿಡುಗಡೆಯಾದ ಎರಡನೇ ದಿನ ಅಂದರೆ ಶನಿವಾರ 56.7 ಕೋಟಿ ರೂ.ಗಳಿಕೆ ಮಾಡಿದೆ.

‘ಸ್ಯಾಕ್‌ನಿಲ್ಕ್‌’ನ ಆರಂಭಿಕ ವರದಿಯ ಪ್ರಕಾರ, ‘ಸಲಾರ್’ ಬಿಡುಗಡೆಯಾದ ಮೂರನೇ ದಿನ ಅಂದರೆ ಭಾನುವಾರ 61.00 ಕೋಟಿ ರೂ. ಗಳಿಸಿದ್ದು ಇದರೊಂದಿಗೆ ಮೂರು ದಿನಗಳ ಒಟ್ಟು ಕಲೆಕ್ಷನ್ ಈಗ 208.05 ಕೋಟಿ ರೂ.ಗೆ ಏರಿದೆ. ಸೋಮವಾರವೂ ರಜಾ ದಿನವಾಗಿದ್ದು ಈ ಅಂಕೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾದ ಮುಂದೆ ಶಾರುಖ್ ಖಾನ್ ಅಭಿನಯದ ‘ಡಂಕಿ’ ಮಂಕಾಗಿದೆ. ಮೂರು ದಿನದಲ್ಲಿ ಸಲಾರ್ 200 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದ್ದರೆ, ಶಾರುಖ್ ಖಾನ್ ಅಭಿನಯದ ಡಂಕಿ ನಾಲ್ಕು ದಿನದಲ್ಲಿ 100 ಕೋಟಿ ರೂ.ಗಳ ಗಡಿ ದಾಟಿದೆ.