ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಬುತ. ಎಲೆಯಲ್ಲಿ ಮಾಡುವ ಊಟ ಆಹಾ ಎಂಥಾ ಪರಿಮಳ, ಎಂಥ ರುಚಿ ಎನ್ನುವವರಿದ್ದಾರೆ. ಅಡುಗೆಯಲ್ಲಿ ವಿವಿಧ ರೀತಿಯ ಎಲೆಗಳನ್ನು ಬಳಸಿ ಆಹಾರ ಮಾಡುವುದು ಸಾಮಾನ್ಯ. ಆದರೆ ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ, ಆ ಎಲೆಗಳನ್ನು ಬಳಸಿಯೇ ಆಹಾರ ಬೇಯಿಸಲು ಉಪಯೋಗಿಸುತ್ತಾರೆ. ನಮ್ಮ ಕರಾವಳಿ ಪ್ರದೇಶದಲ್ಲಿ ವಿವಿಧ ಎಲೆಗಳನ್ನು ಬಳಸಿ ಆಹಾರವನ್ನು ಬೇಯಿಸುವ ಹಾಗೂ ಆಹಾರ ಬಡಿಸುವ ಕ್ರಮ ಹಿಂದಿನ ಕಾಲದಿಂದ ರೂಢಿಯಲ್ಲಿದೆ. ಆಹಾರವನ್ನು ಎಲೆಯಲ್ಲಿಟ್ಟು ಬೇಯಿಸುವುದರಿಂದ ಎಲೆಯಲ್ಲಿರುವ ಸತ್ವವು ಆಹಾರದಲ್ಲಿ ಸೇರುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು
ಬಾಳೆಲೆ ಊಟ: ಬೊಂಬಾಟ:
ಬಾಳೆ ಎಲೆಯ ಮೇಲೆ ಊಟ ಮಾಡುವ ಸಂಪ್ರದಾಯ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ. ಬಾಳೆ ಎಲೆ ದಪ್ಪ ಹಾಗೂ ವಾಟರ್ ಪ್ರೂಫ್ ಇರುವುದರಿಂದ ಊಟಕ್ಕೆ ಇದು ಅತ್ಯುತ್ತಮ ಆಯ್ಕೆ . ಎಲೆಯ ಗುಣಗಳು ಆಹಾರದಲ್ಲಿ ಸೇರಿಕೊಳ್ಳಬೇಕಾದರೆ ಪದಾರ್ಥಗಳನ್ನು ಬಿಸಿಬಿಸಿಯಾಗಿ ಬಡಿಸಬೇಕು. ಇನ್ನು ಬಾಳೆ ಎಲೆಯಲ್ಲೇ ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸುತ್ತಾರೆ. ಕುಚ್ಚಲಕ್ಕಿಯ ಕಡುಬು ಕೂಡ ಮಾಡುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬಾಳೆಎಲೆ: ಇದಕ್ಕೆ ಆ್ಯಂಟಿ ಆಕ್ಸಿಡೆಂಟ್ ಗುಣವಿರುದರಿಂದ ನಮ್ಮ ದೇಹದಲ್ಲಿ ಉತ್ಪನ್ನವಾಗುವ ಫ್ರೀರ್ಯಾಡಿಕಲ್ಸನ ಹಾನಿಯನ್ನು ತಡೆಯುತ್ತದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದೆ. ವಿಟಮಿನ್ ಎ ಹಾಗೂ ಕ್ಯಾಲ್ಸಿಯಂನಿಂದ ಕೂಡಿದೆ .
ಮುತ್ತುಗ ಎಲೆ: ಇದರ ಕೆಲವು ಎಲೆಗಳನ್ನು ಜೋಡಿಸಿ ಪ್ಲೇಟ್ ತರ ಮಾಡಿ ಇದರಲ್ಲೇ ತಿಂಡಿ ತಿಂದರೆ ಒಳ್ಳೆಯದು. ಇದರಲ್ಲಿ ಗ್ಲೂಕೋಸ್ ಹಾಗೂ ನಾರಿನಂಶವಿರುವುದರಿಂದ ನಮ್ಮ ದೇಹಕ್ಕೆ ಹಿತ.
ಹಲಸಿನ ಎಲೆ : ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಇದರ ಉಪಯೋಗ ಬಹಳ. ಇಡ್ಲಿ ಹಿಟ್ಟನ್ನು ಹಲಸಿನ ಎಲೆಯಲ್ಲಿ ತುಂಬಿಸಿ ಹಬೆಯಲ್ಲಿ ಬೇಯಿಸುತ್ತಾರೆ. ಇದೊಂದು ವಿಶಿಷ್ಟ ಖಾದ್ಯ ಕೂಡ. ಇದರಲ್ಲಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್ ಗುಣವಿದೆ. ಕ್ಯಾನ್ಸರ್ ಹಾಗೂ ಹೃದಯ ರೋಗಗಳನ್ನು ತಡೆಯುತ್ತದೆ .ಡಯಾಬಿಟಿಸ್ ನ್ನು ನಿಯಂತ್ರಣದಲ್ಲಿ ಇಡುತ್ತದೆ. ನಮ್ಮ ದೇಹದಲ್ಲಿನ ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ.
ಅರಸಿನ ಎಲೆ : ಈ ಎಲೆಯಲ್ಲಿ ಸಿಹಿ ಕಡುಬು, ಸೌತೆ ಕಾಯಿ ಕಡುಬು ಬೇಯಿಸಲು ಉಪಯೋಗಿಸುತ್ತಾರೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಸೆಪ್ಟಿಕ್, ಆ್ಯಂಟಿ ವೈರಲ್ ಹಾಗೂ ಜೀರ್ಣಕಾರಿ ಗುಣಗಳಿವೆ. ನಮ್ಮ ತ್ವಚೆಗೂ ಕೂಡ ಹಿತ. ಆರ್ಥ್ರೈಟಿಸ್ ಇರುವವರಿಗೆ ಇದರ ಉಪಯೋಗ ಬಹಳ ಒಳ್ಳೆಯದು.
ಕೆದಕಿ(ಮೂಡೆ ಎಲೆ )- ಇದರ ಎಲೆಯನ್ನು ಕೊಳವೆಯಾಕಾರದ ತರ ಮಾಡಿ ಇಡ್ಲಿ ಹಿಟ್ಟನ್ನು ತುಂಬಿಸಿ ಬೇಯಿಸುತ್ತಾರೆ. ಇದರಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ಇದು ನಮ್ಮ ತ್ವಚೆಗೆ, ಕಣ್ಣಿಗೆ ಹಾಗೂ ಕೇಶಕ್ಕೆ ಹಿತ. ಶ್ವಾಸಕೋಶಕ್ಕೆ, ರಕ್ತ ಪರಿಚಲನೆಗೆ ಕೂಡ ಒಳ್ಳೆಯದು ,ನಮ್ಮಇಮ್ಯುನಿಟಿ ಕೂಡ ಹೆಚ್ಚಿಸುತ್ತದೆ.













