ಸಲಿಂಗ ವಿವಾಹವನ್ನು ಕಾನೂನು, ಸಮಾಜ ಒಪ್ಪುವುದಿಲ್ಲ: ಕೇಂದ್ರ ಸರ್ಕಾರದಿಂದ ದೆಹಲಿ ಹೈಕೋರ್ಟ್ ಸ್ಪಷ್ಟನೆ

ನವದೆಹಲಿ: ಸಲಿಂಗ ವಿವಾಹ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಸಮಾಜವೂ ಅದನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸಲಿಂಗ ವಿವಾಹಕ್ಕೆ ಹಿಂದೂ ವಿವಾಹ ಕಾಯ್ದೆ (ಎಚ್‌ಎಂಎ) ಹಾಗೂ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮಾನ್ಯತೆ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ‌ಅರ್ಜಿ (ಪಿಐಎಲ್‌) ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲಾನ್‌ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಇಂದು ಅದರ ಬಗ್ಗೆ ವಿಚಾರಣೆ ನಡೆಸಿತು.

ಸಂಸ್ಕಾರಯುತವಲ್ಲದ ವಿವಾಹವನ್ನು ನಮ್ಮ ಕಾನೂನು ವ್ಯವಸ್ಥೆ, ಸಮಾಜ ಸ್ವೀಕರಿಸಲ್ಲ ಎಂದು ಸಾಲಿಸಿಟರ್‌ ಜನರಲ್‌ (ಎಸ್‌ಜಿ) ತುಷಾರ್‌ ಮೆಹ್ತಾ ಕೋರ್ಟ್ ಗೆ ತಿಳಿಸಿದರು.

ಹಿಂದೂ ವಿವಾಹ ಕಾಯ್ದೆಯಲ್ಲಿ ಪತಿ ಪತ್ನಿಯ ಉಲ್ಲೇಖವಿರುತ್ತದೆ. ಆದರೆ ಸಲಿಂಗ ವಿವಾಹದಲ್ಲಿ ಪತಿ ಯಾರು, ಪತ್ನಿ ಯಾರು ಎಂಬುದನ್ನು ಯಾರು ನಿರ್ಧರಿಸುತ್ತಾರೆ’ ಎಂದು ಅವರು ಪ್ರಶ್ನಿಸಿದರು.
ಸಲಿಂಗ ವಿವಾಹ ಒಪ್ಪುವವರು ವಿದ್ಯಾವಂತರೇ ಆಗಿದ್ದಾರೆ. ಅವರು ನೇರವಾಗಿಯೇ ನ್ಯಾಯಾಲಯಕ್ಕೆ ಬರಬಹುದಿತ್ತು. ಅರ್ಜಿ ಸಲ್ಲಿಸಿದ್ದು ಏಕೆ ಎಂದು ಪೀಠವು ಪ್ರಶ್ನಿಸಿತು.

ಸಂತ್ರಸ್ತರು ಸಮಾಜಕ್ಕೆ ಹೆದರುತ್ತಿದ್ದಾರೆ. ಅದಕ್ಕೆ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅರ್ಜಿ ದಾರರ ಪರ ವಕೀಲ ಅಭಿಜಿತ್ ಅಯ್ಯರ್ ತಿಳಿಸಿದರು.

ಸಲಿಂಗ ವಿವಾಹವನ್ನು ನೋಂದಣಿ ಮಾಡಲು ನಿರಾಕರಿಸುವ ವ್ಯಕ್ತಿಗಳ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ಅಭಿಜಿತ್‌ ಅವರಿಗೆ ಪೀಠವು ಸೂಚಿಸಿತು. ಬಳಿಕ ವಿಚಾರಣೆಯನ್ನು ಅಕ್ಟೋಬರ್‌ 21ಕ್ಕೆ ಮುಂದೂಡಿತು.