ಉಡುಪಿ: ಅಜ್ಜರಕಾಡಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾಸ್ಪತ್ರೆ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಸಾರ್ವಜನಿಕ ಸೇವೆಗೆ ಆಸ್ಪತ್ರೆಯನ್ನು ಒದಗಿಸದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕ ಖಂಡಿಸಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರವೇ ಜಿಲ್ಲಾ ಗೌರವಾಧ್ಯಕ್ಷ ಅನ್ಸರ್ ಅಹ್ಮದ್, ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಎಲ್ಲ ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸಿ, 2026ರ ಸೆಪ್ಟೆಂಬರ್ 30ರೊಳಗೆ ಹೊಸ ಕಟ್ಟಡದಲ್ಲಿ ಆಸ್ಪತ್ರೆಯ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದಿದ್ದರೂ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಒದಗಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಜನರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಶೀಘ್ರ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸೆಪ್ಟೆಂಬರ್ 30ರೊಳಗೆ ಆಸ್ಪತ್ರೆಯ ಸೇವೆ ಆರಂಭಿಸದಿದ್ದರೆ ಅಕ್ಟೋಬರ್ 1ರಿಂದ ಆಸ್ಪತ್ರೆಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು. ಪ್ರತಿದಿನವೂ ವಿಭಿನ್ನ ರೀತಿಯ ಹೋರಾಟ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಎಚ್ಚರಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಉಡುಪಿ ಶಾಸಕರು ಹಾಗೂ ಅಧಿಕಾರಿಗಳು ಜಿಲ್ಲಾಸ್ಪತ್ರೆ ಆರಂಭಿಸುವ ವಿಚಾರದಲ್ಲಿ ಸೂಕ್ತ ಗಮನ ಹರಿಸುತ್ತಿಲ್ಲ. ಇನ್ನಾದರೂ ಈ ಬಗ್ಗೆ ಕಾರ್ಯೋನ್ಮುಖರಾಗಿ, ಶೀಘ್ರ ಆಸ್ಪತ್ರೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.















