ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯ ಅಬ್ಬರ ಮುಂದುವರಿದಿದ್ದು, ಯಡಕುಮರಿ ಸಮೀಪ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು–ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಆಗಮಿಸಿ ಗುಡ್ಡ ತೆರವು ಕಾರ್ಯವನ್ನು ಭರದಿಂದ ಕೈಗೊಂಡಿದ್ದಾರೆ. ಹಳಿ ಪುನಃ ಸುರಕ್ಷಿತವಾಗುವವರೆಗೆ ಕಾಮಗಾರಿ ಮುಂದುವರಿಯಲಿದ್ದು, ಸುರಕ್ಷತಾ ದೃಷ್ಟಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರೈಲು ಸಂಚಾರ ರದ್ದತಿಯಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ರಾತ್ರಿ ರೈಲಿಗೆ ಕಾಯುತ್ತಿದ್ದ ಹಲವರು ನಡುರಾತ್ರಿಯಲ್ಲಿ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ ಅಭ್ಯರ್ಥಿಗಳೂ ಪರದಾಡುವಂತಾಗಿದೆ.

ಯಾವ ರೈಲುಗಳು ಎಲ್ಲಿ ನಿಲುಗಡೆ?
- ಬೆಂಗಳೂರು–ಮುರಡೇಶ್ವರ, ಬೆಂಗಳೂರು–ಕೋಜಿಕೋಡ್ ಹಾಗೂ ವಿಜಯಪುರ–ಮಂಗಳೂರು ರೈಲುಗಳು ಹಾಸನದಲ್ಲಿ ನಿಲುಗಡೆಗೊಂಡಿವೆ.
- ಬೆಂಗಳೂರು–ಕಾರವಾರ ಎಕ್ಸ್ಪ್ರೆಸ್ ಸಕಲೇಶಪುರದಲ್ಲಿ ನಿಲ್ಲಿಸಲಾಗಿದೆ.
- ಮುರಡೇಶ್ವರ–ಬೆಂಗಳೂರು ಹಾಗೂ ಮಂಗಳೂರು–ವಿಜಯಪುರ ರೈಲುಗಳು ಸುಬ್ರಹ್ಮಣ್ಯದಲ್ಲಿ ನಿಲುಗಡೆಗೊಂಡಿವೆ.
- ಕೋಜಿಕೋಡ್–ಬೆಂಗಳೂರು ರೈಲು ಪುತ್ತೂರಿನಲ್ಲಿ ಸ್ಥಗಿತಗೊಂಡಿದೆ.
ಸಂಪೂರ್ಣ ರದ್ದಾದ ರೈಲುಗಳು
ಭೂಕುಸಿತದ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಸಂಚರಿಸಬೇಕಿದ್ದ ಕೆಳಗಿನ ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್.
- ರೈಲು ಸಂಖ್ಯೆ 16575 ಯಶವಂತಪುರ–ಮಂಗಳೂರು ಗೋಮಟೇಶ್ವರ ತ್ರೈಮಾಸಿಕ ಎಕ್ಸ್ಪ್ರೆಸ್.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಸಂಭವಿಸಿದ ಭೂಕುಸಿತದಿಂದ ಈ ಬದಲಾವಣೆ ಅನಿವಾರ್ಯವಾಗಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ತಿಳಿಸಿದೆ. ಹಾನಿಗೊಳಗಾದ ಹಳಿಯ ದುರಸ್ತಿ ಪೂರ್ಣಗೊಂಡು ಸುರಕ್ಷಿತವೆಂದು ಘೋಷಿಸುವವರೆಗೆ ಪುನಃಸ್ಥಾಪನೆ ಕಾರ್ಯ ಮುಂದುವರಿಯಲಿದೆ. ಪ್ರಯಾಣಿಕರು ಹೊರಡುವ ಮೊದಲು ತಮ್ಮ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದಾರೆ.















