ಆಂಗ್ಲರ ಕೈಯಿಂದ ಗೆಲುವು ಕಸಿದುಕೊಂಡ ಭಾರತ; ಸರಣಿ ಸಮಬಲ

ಲಂಡನ್:‌ ಅತ್ಯಂತ ರೋಚಕ ಘಟ್ಟದತ್ತ ಸಾಗಿದ್ದ ಭಾರತ – ಇಂಗ್ಲೆಂಡ್‌ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಆರು ರನ್‌ ಅಂತರ ಗೆಲುವು ಸಾಧಿಸಿದೆ.

ಗೆಲುವಿಗೆ 374 ರನ್‌ ಗುರಿ ಪಡೆದಿದ್ದ ಇಂಗ್ಲೆಂಡ್‌ ತಂಡವು 367 ರನ್‌ ಗೆ ಆಲೌಟಾಯಿತು. ಇದರೊಂದಿಗೆ ಭಾರತ ಆರು ರನ್‌ ಅಂತರದ ರೋಚಕ ಜಯ ಸಾಧಿಸಿತು. ಇದರೊಂದಿಗೆ ಆಂಡರ್ಸನ್‌ ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿ 2-2 ರಿಂದ ಸಮಬಲವಾಗಿದೆ.

ಗೆಲುವಿಗೆ 374 ರನ್‌ ಗುರಿ ಪಡೆದ ಇಂಗ್ಲೆಂಡ್‌ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್‌ ಕಳೆದುಕೊಂಡು 339 ರನ್‌ ಮಾಡಿತ್ತು. ‌ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ ಗೆ ಗೆಲುವಿಗೆ 35 ರನ್‌ ಅಗತ್ಯವಿತ್ತು. ಭಾರತ ನಾಲ್ಕು ವಿಕೆಟ್‌ ಕಬಳಿಸಬೇಕಿತ್ತು. ದಿನದ ಮೊದಲೆರಡು ಎಸೆತಗಳಲ್ಲೇ ಓವರ್ಟನ್‌ ಬೌಂಡರಿ ಬಾರಿಸಿದರು. ಮುಂದಿನ ಓವರ್‌ ನಲ್ಲಿ ಬ್ಯಾಟರ್‌ ಸ್ಮಿತ್‌ ರನ್ನು ಸಿರಾಜ್‌ ಔಟ್‌ ಮಾಡಿದರು. ತಮ್ಮ ಮುಂದಿನ ಓವರ್‌ ನಲ್ಲಿ ಸಿರಾಜ್‌ ಮತ್ತೊಂದು ವಿಕೆಟ್‌ ಪಡೆದರು. ಈ ಬಾರಿ ಓವರ್ಟನ್‌ ಬಲಿಯಾದರು.

ನಾಲ್ಕನೇ ದಿನದಾಟದ ಕೊನೆಯ ಸೆಶನ್‌ ನಲ್ಲಿ ಬಿಗಿ ದಾಳಿ ನಡೆಸಿದ್ದ ಭಾರತೀಯ ಬೌಲರ್‌ ಗಳು ಸೋಮವಾರವೂ ಹಿಡಿತ ಸಾಧಿಸಿದರು. ಇಂಗ್ಲೆಂಡ್‌ ಗೆ 17 ರನ್‌ ಅಗತ್ಯವಿದ್ದಾಗ ಪ್ರಸಿಧ್‌ ಕೃಷ್ಣ ವಿಕೆಟ್‌ ಕಿತ್ತರು. ಜೋಶ್‌ ಟಂಗ್‌ ಅವರನ್ನು ಬೌಲ್ಡ್‌ ಮಾಡಿದರು.ಗಾಯಗೊಂಡಿರುವ ಕ್ರಿಸ್‌ ವೋಕ್ಸ್‌ ಒಂದು ಕೈಗೆ ಬಾಂಡೇಜ್‌ ಹಾಕಿದ್ದರೂ ಬ್ಯಾಟಿಂಗ್‌ ಮಾಡಲು ಆಗಮಿಸಿದರು. ಸಿರಾಜ್‌ ಎಸೆತಕ್ಕೆ ಸಿಕ್ಸರ್‌ ಬಾರಿಸಿದ ಅಟ್ಕಿನ್‌ ಸನ್‌ ಗುರಿಯನ್ನು 11ಕ್ಕೆ ತಂದರು. ಕೊನೆಯಲ್ಲಿ ಏಳು ರನ್‌ ಬಾಕಿ ಇರುವಂತೆ ಮೊಹಮ್ಮದ್‌ ಸಿರಾಜ್‌ ಎಸೆತಕ್ಕೆ ಗಸ್‌ ಅಟ್ಕನ್‌ ಸನ್‌ ಬೌಲ್ಡ್‌ ಆದರು.