ಉಡುಪಿ: FRUITS ತಂತ್ರಾಂಶದಲ್ಲಿ ಜಿಲ್ಲೆಯ ರೈತರ ಎಲ್ಲಾ ಜಮೀನಿನ ಮಾಹಿತಿಯನ್ನು ಮುಂದಿನ 15
ದಿನಗಳ ಒಳಗೆ ದಾಖಲಿಸಲು ಸರ್ಕಾರದ ನಿರ್ದೇಶನವಿರುತ್ತದೆ. ಬರಗಾಲದಿಂದ ಉಂಟಾದ ಬೆಳೆ ನಷ್ಟಕ್ಕೆ ದೊರೆಯುವ ಪರಿಹಾರವು ಫ್ರೂಟ್ಸ್ ತಂತ್ರಾಂಶದ ದಾಖಲೆಯನ್ವಯ ರೈತರ ಖಾತೆಗೆ ನೇರವಾಗಿ ಮುಂದಿನ ದಿನಗಳಲ್ಲಿ ಜಮೆಯಾಗಲಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ಲಭ್ಯ ಫ್ಲಾಟ್ 10,20,896 ಗಳಲ್ಲಿ ಈವರೆಗೆ 4,59,453 ಫ್ಲಾಟ್‌ಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದ್ದು, ಇನ್ನೂ 5,61,440 ಫ್ಲಾಟ್‌ಗಳನ್ನು ಜೋಡಿಸಬೇಕಾಗಿರುತ್ತದೆ. ಸದ್ರಿ ಕಾರ್ಯವನ್ನು ಕ್ಷೇತ್ರ ಮಟ್ಟದಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಲಾಗಿನ್‌ಗಳನ್ನು ಮೂಲಕ ಮುಂದಿನ 15 ದಿನಗಳ ಅವಧಿಯಲ್ಲಿ ಅಭಿಯಾನ ರೂಪದಲ್ಲಿ ಕೈಗೊಂಡು, ಫ್ರೂಟ್ಸ್ ತಂತ್ರಾಂಶದಲ್ಲಿ ಶೇ.100 ರಷ್ಟು ಲ್ಯಾಂಡ್ ಅಪ್‌ಡೇಶನ್ ಪ್ರಗತಿ ಸಾಧಿಸಲು
ಸರ್ಕಾರದಿಂದ ನಿರ್ದೇಶಿಸಲಾಗಿರುತ್ತದೆ.
ಫ್ರೂಟ್ಸ್ ತಂತ್ರಾಂಶದ ಮಾಹಿತಿಯನ್ನು ಸರ್ಕಾರದ ವಿವಿಧ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಸಾಲ ವಿತರಣೆ, ಬೆಳೆ ಪರಿಹಾರ ವಿತರಣೆ, ಬೆಂಬಲ ಬೆಲೆ ಅನುಷ್ಟಾನ, ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆಗೆ ಬಳಕೆ ಮಾಡುತ್ತಿದ್ದು, ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಸಹಕಾರ ಇಲಾಖೆ ಹಾಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸದ್ರಿ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯ ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಮತ್ತು ಶಾಖೆಯ ವಿವರ, ಬ್ಯಾಂಕ್ ಐ.ಎಫ್.ಎಸ್.ಸಿ ಕೋಡ್, ಪಡಿತರ ಚೀಟಿಯ ವಿವರ, ಮೊಬೈಲ್ ಸಂಖ್ಯೆ, ಪರಿಶಿಷ್ಟ ಜಾತಿ/ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೇ ನಂಬರ್ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರರ ಕಛೇರಿ, ಕಂದಾಯ ನಿರೀಕ್ಷಕರ ಕಛೇರಿ,
ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಯ ಕಛೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ಮಾಲಿಕತ್ವದ ಎಲ್ಲಾ ಪಹಣಿಯ ದಾಖಲೆಗಳನ್ನು ಮುಂದಿನ 15 ದಿನಗಳ ಒಳಗಾಗಿ ನೀಡಿ, ನೋಂದಾಯಿಸಿಕೊಳ್ಳಬಹುದಾಗಿದೆ. ಸದ್ರಿ ಮಾಹಿತಿಯನ್ನು ಸರ್ಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ನೀಡಲು ಮಾತ್ರ ಬಳಕೆ ಮಾಡುವುದರಿಂದ ರೈತರು ನಿರ್ಭೀತಿಯಿಂದ ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ
ಕಚೇರಿ ಪ್ರಕಟಣೆ ತಿಳಿಸಿದೆ.