ದೊಡ್ಡಣ್ಣಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 1 ರಂದು ಹುಣ್ಣಿಮೆಯ ಪರ್ವಕಾಲದಲ್ಲಿ ಶ್ರೀ ಚಕ್ರ ಪೀಠ ಸುರಪೂಜಿತೆಗೆ ಅತಿ ವಿಶೇಷವಾದ ಶ್ರೀ ಲಲಿತಾ ಸಹಸ್ರ ಕದಳಿಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಭಕ್ತರೋರ್ವರ ಪ್ರಯುಕ್ತ ಪ್ರಾಯಶ್ಚಿತ ರೂಪದಲ್ಲಿ ನೆರವೇರಲಿದೆ.
ಬಹು ಅಪರೂಪವಾದ ಅತಿ ವಿಶಿಷ್ಟ ಫಲಪ್ರದವೆನಿಸಿದ ಈ ಯಾಗವು ಬೆಳಿಗ್ಗೆ 9:00ಕ್ಕೆ ಆರಂಭಗೊಳ್ಳಲಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಾಳೆಹಣ್ಣನ್ನು ಹೋಮಿಸಿ ಲಲಿತಾ ಸಹಸ್ರನಾಮದಿಂದ ಶ್ರೀ ರಾಜರಾಜೇಶ್ವರಿಯನ್ನು ಆರಾಧಿಸಿ ವಿಧ ವಿಧದ ಪುಷ್ಪಗಳಿಂದ ಆಕೆಯನ್ನು ಅರ್ಚಿಸಿ ಬಗೆ ಬಗೆಯ ನೈವೇದ್ಯವಿಟ್ಟು ಅನುಗ್ರಹ ಯಾಚಿಸುವ ಈ ಪೂಜೆಯಿಂದ ಮೋಕ್ಷ ಹಾಗೂ ಭೋಗವನ್ನು ಏಕಕಾಲದಲ್ಲೇ ಪಡೆಯಬಹುದು.
ಯಾಗದ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ ಆರಾಧನೆ, ಕನ್ನಿಕ ಆರಾಧನೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾರೆ.