ದೊಡ್ಡಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವೇ|ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ಜೋಡಿ ಚಂಡಿಕಾಯಾಗ, ದುರ್ಗಾನಮಸ್ಕಾರ ಪೂಜೆ, ಕಲ್ಪೋಕ್ತ ಪೂಜೆ ಸಹಿತ ರಂಗಪೂಜೆಯು ಅನ್ನಪ್ರಸಾದ ವಿತರಣೆಯೊಂದಿಗೆ ನೆರವೇರಿತು.
ಮಂಗಳೂರಿನ ಉದ್ಯಮಿ ಶರೂನ್ ಮತ್ತು ಶ್ವೇತಾ ದಂಪತಿ ಹಾಗೂ ಮಣಿಪಾಲ ಎಂಐಟಿಯ ರೀತು ಕೇಯೂರು ಅವರ ಸೇವಾರ್ಥ ಜೋಡಿ ಚಂಡಿಕಾಯಾಗ, ಕ್ಷೇತ್ರದ ವತಿಯಿಂದ ಕುಬೇರ ಲಕ್ಷ್ಮೀ ಸಾನ್ನಿಧ್ಯದಲ್ಲಿ ಮಹಾಲಕ್ಷ್ಮೀ ಸಹಸ್ರನಾಮ ಯಾಗ, ದೊಡ್ಡಣಗುಡ್ಡೆಯ ಉದಯ ಮತ್ತು ರೇಖಾ ದಂಪತಿಯ ಸೇವಾರ್ಥ ದುರ್ಗಾನಮಸ್ಕಾರ ಪೂಜೆ, ಕಲ್ಪೋಕ್ತ ಪೂಜೆ ಸಹಿತ ರಂಗಪೂಜೆ ಜರಗಿತು.
ನವಶಕ್ತಿ ವೇದಿಕೆ ಹಾಗೂ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಕ್ಷೇತ್ರದ ನಾಟ್ಯರಾಣಿ ಗಂಧರ್ವ ಕನ್ಯೆಯ ಪ್ರೀತ್ಯರ್ಥವಾಗಿ ದೇವಿಯ ಕೃಪಾಶೀರ್ವಾದಕ್ಕಾಗಿ ಅಕ್ಷರಾ ಆಚಾರ್ಯ, ಶ್ರೇಷ್ಠಾ, ಸ್ತುತಿ, ಲಕ್ಷ್ಮೀ, ವಿಭಾ, ಇಶಾನ್, ಆರಾಧ್ಯಾ, ಅಂಶಿಕಾ ಅವರಿಂದ ನೃತ್ಯ ಸೇವೆ ಸಮರ್ಪಿಸಲ್ಪಟ್ಟಿತು. ಸ್ವಾತಿ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ವೈಭವ, ಕುಂಜಿಬೆಟ್ಟು ರಾಜರಾಜೇಶ್ವರ ಭಜನ ಮಂಡಳಿ, ದುರ್ಗಾ ಆದಿಶಕ್ತಿ ಭಜನ ಮಂಡಳಿಯಿಂದ ಭಜನೆ ಸಂಕೀರ್ತನೆ ನಡೆಯಿತು.
ಶರನ್ನವರಾತ್ರಿ ಪರ್ವಕಾಲದಲ್ಲಿ ದೂರದೂರುಗಳಿಂದ ಬೆಳಗ್ಗಿನಿಂದ ರಾತ್ರಿಯ ವರೆಗೆ ಭಕ್ತರು ಕ್ಷೇತ್ರಕ್ಕೆ ಧಾವಿಸುತ್ತಿದ್ದಾರೆ. ಅನ್ನಪ್ರಸಾದಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ವೃದ್ಧಿಸುತ್ತಿದ್ದು, ಭಕ್ತರು ಸಂತೃಪ್ತ ಭಾವ ತೋರ್ಪಡಿಸುತ್ತಿದ್ದಾರೆ. ದೇವಿಯ ಪ್ರಸಾದವನ್ನು ಬಡಿಸಿ ಉಣಿಸಬೇಕೇ ಹೊರತೂ ಕೇಳಿ ತಿನ್ನುವುದಲ್ಲ ಎನ್ನುವ ನೆಲೆಯಲ್ಲಿ ಕ್ಷೇತ್ರದಲ್ಲಿ ಇದುವರೆಗೂ ಬಫೆ ಪದ್ಧತಿ ಅಳವಡಿಸಿಲ್ಲ ಎಂದು ರಮಾನಂದ ಗುರೂಜಿ ತಿಳಿಸಿದ್ದಾರೆ.
ನಾಳೆ ಲಲಿತಾ ಸಹಸ್ರ ಕದಳೀಯಾಗ
ಕ್ಷೇತ್ರದಲ್ಲಿ ಅ. 19ರ ಬೆಳಗ್ಗೆ 8.30ಕ್ಕೆ ಲಲಿತಾ ಸಹಸ್ರ ಕದಳೀಯಾಗ ಆರಂಭಗೊಳ್ಳಲಿದ್ದು, 11ಕ್ಕೆ ಪೂರ್ಣಾಹುತಿ ನಡೆಯಲಿದೆ. ದಕ್ಷಿಣ ಭಾರತದಲ್ಲಿಯೇ ಮೇರು ಶ್ರೀಚಕ್ರಪೀಠವನ್ನು ಹೊಂದಿರುವ ಕ್ಷೇತ್ರದಲ್ಲಿ ಅಗ್ನಿ ಮುಖೇನ ಆಹುತಿ ನೀಡಿ ಆರಾಧಿಸುವ ಯಾಗ ಇದಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.