ಮಲ್ಪೆ: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದ ಯೋಗೀಶ್ ಪೂಜಾರಿ(26) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ಸುಜಿತ್ ಪಿಂಟೋ(37), ಆತನ ಅಣ್ಣ ರೋಹಿತ್ ಪಿಂಟೋ(43), ಪ್ರದೀಪ್ ಯಾನೆ ಅಣ್ಣು(40), ವಿನಯ(36) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಾದ ಗಿರೀಶ್ ಹಾಗೂ ಅನುಪ್ ಎಂಬುವವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಜು.6ರಂದು ರಾತ್ರಿ ದುಷ್ಕರ್ಮಿಗಳು ಯೋಗೀಶ್ ಪೂಜಾರಿಯ ಹೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಚೂರಿಯಿಂದ ಬಲವಾಗಿ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಅದರಂತೆ ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜು.7ರಂದು ರಾತ್ರಿ ಕಲ್ಯಾಣಪುರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.