ಮಂಗಳೂರು: ಭಾನುವಾರ ಸಂಜೆ ಮಂಗಳೂರಿನ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದ್ದು, ಪ್ರಧಾನಿ ಮೋದಿ ರೋಡ್ ಶೋ ನಲ್ಲಿ ದಾಖಲೆ ಸಂಖ್ಯೆಯ ಜನರು ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
“ಮಂಗಳೂರಿನಲ್ಲಿ ನಡೆದ ರೋಡ್ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ಮಂಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು. ಕರ್ನಾಟಕದ ಈ ಭಾಗ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ನಮ್ಮ ಸಿದ್ಧಾಂತ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ವರ್ಷಗಳಿಂದ ಆಶೀರ್ವದಿಸಿದ್ದಾರೆ” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
“ಕಳೆದ ದಶಕದಲ್ಲಿ ನಮ್ಮ ಸರ್ಕಾರ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಸಾರಿಗೆ, ಬಂದರು ಅಭಿವೃದ್ಧಿ, ಮೀನುಗಾರಿಕೆ ಮತ್ತು ಮಹಿಳಾ ಮೀನುಗಾರರ ಸಬಲೀಕರಣ, ಇಂಧನ, ಆರೋಗ್ಯ ಮತ್ತು ಇತರೆ ವಲಯಗಳನ್ನು ಕೇಂದ್ರೀಕರಿಸಿ ಕೆಲಸ ಮಾಡಲಾಗಿದೆ. ಇಲ್ಲಿನ ಉದ್ಯಮಶೀಲ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಅನೇಕ ಜನರಿಗೆ ನಮ್ಮ ಆರ್ಥಿಕ ಸುಧಾರಣೆಗಳ ಮೇಲಿನ ಒತ್ತು ಪ್ರಯೋಜನಕಾರಿಯಾಗಿದೆ”.
“ಇತ್ತೀಚೆಗೆ ನಾನು ಉದ್ಘಾಟಿಸಿದ ಮತ್ತು ಶಿಲಾನ್ಯಾಸ ನೆರವೇರಿಸಿದ ಕೆಲಸಗಳಿಂದ ಇಲ್ಲಿನ ಜನರ ಜೀವನಮಟ್ಟ ಸುಧಾರಣೆಗೆ ಪುಷ್ಟಿ ದೊರೆಯಲಿದೆ. ಕೊಚ್ಚಿ – ಮಂಗಳೂರು ಪೈಪ್ ಲೈನ್ ಯೋಜನೆಯು ಸಹ ಇದರಲ್ಲಿ ಸೇರಿದೆ. ಮುಂಬರುವ ದಿನಗಳಲ್ಲಿ ಇಲ್ಲಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು ವಲಯಕ್ಕೆ ಸಂಬಂಧಿಸಿದಂತೆ ಮೂಲ ಸೌಕರ್ಯವನ್ನು ಆಧುನೀಕರಣಗೊಳಿಸಲಾಗುವುದು”.
“ನಮ್ಮ ಮೂರನೇ ಅವಧಿಯಲ್ಲಿ ಭವಿಷ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳನ್ನು ಸುಧಾರಿಸುವಲ್ಲಿ ಮತ್ತು ಈ ಪ್ರದೇಶದಲ್ಲಿ ಇನ್ನೂ ಉತ್ತಮವಾದ ರೀತಿಯಲ್ಲಿ ಆರೋಗ್ಯ ವಲಯದ ರಕ್ಷಣೆಗೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ನಾವು ನೀಲಿ ಕ್ರಾಂತಿಯಲ್ಲಿ ಕೆಲಸ ಮಾಡಲು ಬಯಸುತ್ತಿದ್ದು, ಇದರಿಂದ ಮೀನುಗಾರರಿಗೆ ಉತ್ತೇಜನ ಸಿಗಲಿದೆ. ಇದೇ ರೀತಿ ನಾವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಾಗಿದ್ದು, ಇದರಿಂದ ಕರ್ನಾಟಕದ ಈ ಭಾಗವನ್ನು ಹೆಚ್ಚಿನ ಜನ ನೋಡಲು ಸಹಕಾರಿಯಾಗಲಿದೆ”.
“ನಾವು ಇಂದು ಬಿಡುಗಡೆ ಮಾಡಿದ ಸಂಕಲ್ಪ ಪತ್ರದಲ್ಲಿ ಮಂಗಳೂರು ಅಭಿವೃದ್ಧಿಗಾಗಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ವಿಶೇಷವಾಗಿ ನಗರಾಭಿವೃದ್ಧಿ ಮೂಲಕ “ಸುಗಮ ಜೀವನ” ಕಲ್ಪಿಸುವುದು ಮತ್ತು ಇತರೆ ಕೆಲಸಗಳನ್ನು ಮಾಡುತ್ತೇವೆ. ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ನಿರೂಪಿಸಲಾದ ದೃಷ್ಟಿಕೋನ ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸುತ್ತದೆ”.
“ಮತಬ್ಯಾಂಕ್ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್ ಗೆ ಮತ ಹಾಕಲು ದಕ್ಷಿಣ ಕನ್ನಡಕ್ಕೆ ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಅವರಿಗೆ ಕರ್ನಾಟಕದ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ”.