ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಮಹಿಳೆಯರಿಗೆ ಮಹಿಳಾ ವಿಶ್ರಾಂತಿ ಕೊಠಡಿ ಸೌಲಭ್ಯ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮತ್ತು ಕಚೇರಿಗೆ ಆಗಮಿಸುವ ಮಹಿಳೆಯರಿಗೆ ಇನ್ನು ಮುಂದೆ ಸುಸಜ್ಜಿತ ವಿಶ್ರಾಂತಿ ಕೊಠಡಿ ಸೌಲಭ್ಯ ದೊರೆಯಲಿದೆ.

ಉಡುಪಿಯ ನಿರ್ಗಮಿತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು, ಮಹಿಳಾ ನೌಕರರು ಹಾಗೂ ಕಚೇರಿಗೆ ಆಗಮಿಸುವ ಮಹಿಳೆಯರ ಸಮಸ್ಯೆಗಳನ್ನು ಅರಿತು, ವಿಶೇಷ ಆಸಕ್ತಿ ವಹಿಸಿ ಆರಂಭಿಸಿರುವ ಈ ಮಹಿಳಾ ವಿಶ್ರಾಂತಿ ಕೊಠಡಿ ಮಹಿಳೆಯರ ಎಲ್ಲಾ ಅಗತ್ಯತೆಗಳನ್ನು ಪೂರೈಸಲಿದೆ.

ಈ ಕೊಠಡಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಊಟ ಮಾಡಲು ಡೈನಿಂಗ್ ಟೇಬಲ್ ವ್ಯವಸ್ಥೆ, ವಿಶ್ರಾಂತಿ ಪಡೆಯಲು ಮಂಚ ಮತ್ತು ಬೆಡ್ ವ್ಯವಸ್ಥೆ ಇದೆ. ಅಲ್ಲದೇ ತಾಯಿಯರೊಂದಿಗೆ ಆಗಮಿಸುವ ಮಕ್ಕಳನ್ನು ಮಲಗಿಸಲು ಮರದ ತೊಟ್ಟಿಲು, ಉಡುಪು ಬದಲಾವಣಾ ಕೊಠಡಿ ಸೌಲಭ್ಯ ಸಹ ಇದೆ.

ಶೌಚಾಲಯದಲ್ಲಿ ನ್ಯಾಪ್ಕಿನ್ ಬರ್ನಿಂಗ್ ವ್ಯವಸ್ಥೆ ಕೂಡಾ ಇದ್ದು, ಮುಂದಿನ ದಿನಗಳಲ್ಲಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಸಹ ಬರಲಿದ್ದು, ಈ ಮೆಷಿನ್‍ನಲ್ಲಿ ನಿಗಧಿತ ನಾಣ್ಯ ಪಾವತಿಸುವ ಮೂಲಕ ನ್ಯಾಪ್ಕಿನ್ ಪಡೆಯುವ ಸೌಲಭ್ಯ ದೊರೆಯಲಿದೆ.

ಮಹಿಳೆಯಾಗಿ ಮಹಿಳೆಯರ ಕಷ್ಟಗಳನ್ನು ಅರಿತ  ಹೆಪ್ಸಿಬಾ ರಾಣಿ ಕೊರ್ಲಪಾಟಿ, ವಿಶೇಷ ಮತುವರ್ಜಿ ವಹಿಸಿ ಈ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು, ಮಂಗಳವಾರ ಈ ಕೊಠಡಿ ಉದ್ಘಾಟನೆಗೊಂಡಿದೆ.