ಸೈಪ್ರಸ್: ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪನದ ನಂತರ, 5,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ವಿಶ್ವದ ಬಹುತೇಕ ದೇಶಗಳು ಟರ್ಕಿಗೆ ಸಹಾಯ ಹಸ್ತ್ ಚಾಚಿವೆ. ಭಾರತವೂ ಕೂಡಾ ಶ್ವಾನದಳ ಮತ್ತು 101 ಸದಸ್ಯರ ಎನ್.ಡಿ.ಆರ್.ಎಫ್ ತಂಡವನ್ನು ಕಳುಹಿಸಿದ್ದು, ತಂಡವು ಅದಾಗಲೇ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ಈ ಮಧ್ಯೆ ಶ್ವಾನದಳದಲ್ಲಿ ಜೂಲಿ, ರೋಮಿಯೋ, ಹನಿ ಮತ್ತು ರಾಂಬೊ ಎನ್ನುವ ನಾಲ್ಕು ಶ್ವಾನಗಳು ರಕ್ಷಣಾ ಕಾರ್ಯಾಚರಣೆಯ ಭಾಗವಾಗಿವೆ. ಈ ಲ್ಯಾಬ್ರಡಾರ್ ತಳಿಯ ಶ್ವಾನದಳವು ವಿಶೇಷವಾಗಿ ತರಬೇತಿ ಪಡೆದಿದೆ ಮತ್ತು ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಅಗತ್ಯವಿರುವ ಸ್ನಿಫಿಂಗ್ ಮತ್ತು ಇತರ ನಿರ್ಣಾಯಕ ಕೌಶಲ್ಯಗಳಲ್ಲಿ ಪರಿಣಿತವಾಗಿದೆ.
“ಆಪರೇಷನ್ ದೋಸ್ತ್” ನಡಿ ಭಾರತೀಯ ಸೇನೆ ಮತ್ತು ವಾಯುಸೇನೆ ತುಕಡಿಯು ದುರಂತದ ಕೇಂದ್ರಬಿಂದುವನ್ನು ತಲುಪಿದ ಪ್ರಪ್ರಥಮ ತಂಡವಾಗಿದೆ. ಟರ್ಕಿಯಲ್ಲಿ ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದು, ಇನ್ನೂ 10 ಮಂದಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ ಆದರೆ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ರಕ್ಷಣಾ ತಂಡಗಳು ಮತ್ತು ಪರಿಹಾರವನ್ನು ಕಳುಹಿಸಲು ನವದೆಹಲಿ ಸಿದ್ಧವಾಗಿದೆ.
ನಮ್ಮಲ್ಲಿ ಒಬ್ಬ ಭಾರತೀಯ ಪ್ರಜೆ ಕಾಣೆಯಾಗಿದ್ದು, ಅವರು ವ್ಯಾಪಾರಕ್ಕಾಗಿ ಮಾಲತ್ಯ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದರು ಮತ್ತು ಕಳೆದ ಎರಡು ದಿನಗಳಿಂದ ಅವರು ಪತ್ತೆಯಾಗಿಲ್ಲ. ನಾವು ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ತಿಳಿಸಿದ್ದಾರೆ.
ಏತನ್ಮಧ್ಯೆ, ಟರ್ಕಿಯಲ್ಲಿ ನಡೆಯುತ್ತಿರುವ ಪರಿಹಾರ/ರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸಲು, ಗರುಡಾ ಏರೋಸ್ಪೇಸ್‌ಗೆ ತಮ್ಮ ಡಿಜಿಸಿಎ ಅನುಮೋದಿತ ಡ್ರೋನ್‌ಗಳನ್ನು ಕಾರ್ಯಾಚರಣೆಗಾಗಿ ಒದಗಿಸುವಂತೆ ಎನ್.ಡಿ.ಆರ್.ಎಫ್ ವಿನಂತಿಸಿದೆ.
ಗರುಡಾ ಏರೋಸ್ಪೇಸ್ ತಮ್ಮ “ಡ್ರೋಣಿ” ಡ್ರೋನ್ ಅನ್ನು ಕಣ್ಗಾವಲಿಗಾಗಿ ನಿಯೋಜಿಸುತ್ತದೆ ಮತ್ತು “ಕಿಸಾನ್” ಡ್ರೋನ್ ಅನ್ನು ಔಷಧಗಳು, ಸರಬರಾಜುಗಳು, ಆಹಾರ ಇತ್ಯಾದಿಗಳಂತಹ ಪೇಲೋಡ್‌ಗಳನ್ನು ಸಾಗಿಸಲು ನಿಯೋಜಿಸುತ್ತದೆ.