ರಂಗದಲ್ಲೇ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಯಕ್ಷಗಾನ ಕಲಾವಿದ

ಬೈಂದೂರು :ಜಲವಳ್ಳಿ ಮೇಳದ ಖ್ಯಾತ ಕಲಾವಿದ ಹುಡುಗೋಡು ಚಂದ್ರಹಾಸ(52) ಅವರು ತಾಲ್ಲೂಕಿನ ಯಳಜಿತ ಗ್ರಾಮದ ಜೋಗಿಜಡ್ಡು ಎಂಬಲ್ಲಿ ಭಾನುವಾರ ರಾತ್ರಿ ಯಕ್ಷಗಾನ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ರಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೈಂದೂರಿನಲ್ಲಿ ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ಮೇಳದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಕುಣಿಯುತ್ತಿದ್ದಾಗ ರಂಗದಲ್ಲಿಯೇ ಹುಡುಗೋಡು ಚಂದ್ರಹಾಸ ಅವರು ಕುಸಿದು ಬಿದ್ದಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ದಿಗ್ಬಾಂತರಾದ ಮೇಳದ ಕಲಾವಿದರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ.

ಸಾಲ್ವನ‌ ಪಾತ್ರದಲ್ಲಿ ಮಿಂಚಿದ ಮೇರು ಕಲಾವಿದ: 

ಬಡಗುತಿಟ್ಟಿನಲ್ಲಿ ಚಂದ್ರಹಾಸರ ಹೆಸರು‌ ದೊಡ್ಡದು. ಇವರು  ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಕಲಾವಿದರು. ಭೀಷ್ಮವಿಜಯದ ಸಾಲ್ವನ ಪಾತ್ರವೇ ಇವರಿಗೆ ಯಕ್ಷಗಾನ‌ಲೋಕದಲ್ಲಿ ಹೆಗ್ಗಳಿಕೆ ತಂದು ಕೊಟ್ಟಿತ್ತು. ಅವರ ಆ ಪಾತ್ರಕ್ಕಾಗಿಯೇ ಯಕ್ಷಾಭಿಮಾನಿಗಳು ಕಾಯುತ್ತಿದ್ದರು. ಭಾನುವಾರ ಕೂಡ ಅವರು ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸುತ್ತಿದ್ದರು. ಸಾಲ್ವ ಹಾಗೂ ಭೀಷ್ಮನ ಸಂಭಾಷಣೆ ಬಿರುಸಾಗಿ ನಡೆಯುತ್ತಿತ್ತು. ಭೀಷ್ಮನೊಂದಿಗೆ  ಮಾತಾಡುತ್ತಲೇ ಮಧ್ಯೆ ಸಾಲ್ವನಾದ ಚಂದ್ರಹಾಸ ಕುಸಿದು ಬಿದ್ದದ್ದನ್ನು ನೋಡಿ ಇಡೀ ಜನಸಮೂಹವೇ ಹೌಹಾರಿತು. ಅಷ್ಟು ಹೊತ್ತು ಪ್ರಸಂಗ ನೋಡುತ್ತಲೇ ಖುಷಿ ಪಡುತ್ತಿದ್ದವರಿಗೆ ಹೀಗೊಂದು ಆಘಾತಕಾರಿ ಘಟನೆ ನಡೆದದ್ದು ಅರಗಿಕೊಳ್ಳಲಾಗಲೇ ಇಲ್ಲ.

ವಿಡಿಯೋ ನೋಡಿ ಕಣ್ಣೀರಾದ ಯಕ್ಷಾಭಿಮಾನಿಗಳು:

ಚಂದ್ರಹಾಸ ಹುಡಗೋಡ್‌ ಫೇಸ್‌ಬುಕ್‌ ಖಾತೆಯಿಂದ ಪ್ರಸಂಗ ಲೈವ್‌ ಮಾಡಲಾಗುತ್ತಿತ್ತು. ಅವರು ಕುಸಿದುಬಿದ್ದ ದೃಶ್ಯ ಕೂಡ ಇದರಲ್ಲಿ‌ ಸೆರೆಯಾಗಿದ್ದು, ಕಲಾಭಿಮಾನಿಗಳು ಆ ದೃಶ್ಯ‌ ನೋಡುತ್ತಲೇ ಕಣ್ಣೀರಾಗಿದ್ದಾರೆ.  ಕಲಾವಿದ ಚಂದ್ರಹಾಸ ಅವರು ಹೊನ್ನಾವರ ಸಮೀಪದ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. ಪ್ರಸಂಗದಲ್ಲಿ ಚಂದ್ರಹಾಸ ಅವರ ‍ಪುತ್ರ ಪ್ರದೀಪ್‌ ಸಹ  ಭಾಗಿಯಾಗಿದ್ದರು. ಘಟನೆ ನಡೆದ ಬಳಿಕ ಇಡೀ ರಾತ್ರಿಯ ಪ್ರದರ್ಶನವನ್ನು ರದ್ದುಪಡಿಸಲಾಯಿತು.