ಕುಂದಾಪುರ: ಕಳ್ಳತನ ಆರೋಪಿಗಳ ಬಂಧನ; 16 ಲಕ್ಷ ಮೌಲ್ಯದ ಸ್ವತ್ತು ಸ್ವಾಧೀನ

ಕುಂದಾಪುರ: ಕುಂದಾಪುರ ಠಾಣಾ ವ್ಯಾಪ್ತಿಯ ಕೋಟೇಶ್ವರ ಗ್ರಾಮದ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕುಂದಾಪುರ ಪಿಎಸ್ಐ ಮತ್ತು ತಂಡ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 15 ಲಕ್ಷ ಮೌಲ್ಯದ ಚಿನ್ನಾಭರಣಗಳು, 1 ಲಕ್ಷ ಮೌಲ್ಯದ ಬೆಳ್ಳಿ ಒಟ್ಟು 16 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಪ್ರಕರಣ

ಕಾಸರಗೋಡಿನ ಹಾಶಿಮ್ ಎ.ಎಚ್ ಮತ್ತು ಅಬೂಬಕ್ಕರ್ ಸಿದ್ದಿಕ್ ಎಂಬ ಕಳ್ಳರಿಬ್ಬರು ಕೋಟೇಶ್ವರದ ಪ್ರಸನ್ನ ನಾರಾಯಣ ಆಚಾರ್ಯರವರ ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದರು. ಈ ಇಬ್ಬರನ್ನೂ ಕ್ರಮವಾಗಿ ಕಾಸರಗೋಡು ಮತ್ತು ಮಡಿಕೇರಿಯಲ್ಲಿ ಪತ್ತೆ ಹಚ್ಚಲಾಗಿದ್ದು, ಕುಂದಾಪುರ ಎಸ್.ಐಗಳಾದ ಸದಾಶಿವ ಗವರೋಜಿ ಮತ್ತು ಪ್ರಸಾದ್ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇವರನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳು ಕುಂದಾಪುರ, ಉಡುಪಿ, ಮಲ್ಪೆ ಠಾಣೆ ಹಾಗೂ ಅಂತರ್ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಕಾರ್ಯಚರಣೆಯಲ್ಲಿ ಭಾಗವಹಿಸಿರುವ ತಂಡಕ್ಕೆ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.