ಕುಂದಾಪುರದಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ

ಕುಂದಾಪುರ: ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿರುವ ಐಸೋಲೇಶನ್ ವಾರ್ಡ್ನಲ್ಲಿ ಥ್ರೋಟ್ ಗಂಟಲು ದ್ರವ ಪರೀಕ್ಷಾ ಕೇಂದ್ರವನ್ನು ಶನಿವಾರ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ರಾಜು ಕೆ. ಅವರು ಉದ್ಘಾಟಿಸಿದರು.

ರೋಟರಿ ಕ್ಲಬ್ ಕುಂದಾಪುರ, ಸಿದ್ದಾಪುರ ವೆಲ್‌ಫೆರ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ೪೦ ಸಾವಿರ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಈ ಗಂಟಲು ದ್ರವ ತಪಾಸಣಾ ಕೇಂದ್ರವು ಕುಂದಾಪುರದಲ್ಲೇ ಮೊದಲ ಟೆಸ್ಟಿಂಗ್ ಕೇಂದ್ರವಾಗಿದೆ.

ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಎಸಿ ಕೆ. ರಾಜು ಅವರು, ಕೊರೋನಾ ತಡೆಗಟ್ಟುವಿಕೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಅತ್ಯಗತ್ಯ. ಸರಕಾರದ ಆದೇಶಗಳನ್ನು ಪಾಲಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.

ರೋಟರಿ ಕ್ಲಬ್ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಹಾಗೂ ಕುಂದಾಪುರ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಮಾತನಾಡಿದರು.

ಈ ಸಂದರ್ಭ ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಜಾರಾಮ್ ಶೆಟ್ಟಿ, ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ಪಿಜಿಶಿಯನ್ ಡಾ. ನಾಗೇಶ್, ವೈದ್ಯರುಗಳು, ರೋಟರಿ ಕ್ಲಬ್ ಪದಾಧಿಕಾರಿಗಳಿದ್ದರು.