-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆ ಮೂಲಕ ಕುಂದಾಪುರದ ಜನರನ್ನು ರಂಜಿಸುತ್ತಿದ್ದ ರಾಕ್ಸ್ಟಾರ್ ಖ್ಯಾತಿಯ ಕುಂದಾಪುರದ ವೈಕುಂಠ ತೀವ್ರ ಅಸ್ವಸ್ಥಗೊಂಡ ಪರಿಣಾಮ ಬುಧವಾರ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಂಬಳ್ಳಿ ನಿವಾಸಿ ವೈಕುಂಠ ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ತೀವ್ರ ಅಸ್ವಸ್ಥಗೊಂಡು ಮಲಗಿದ್ದರು. ಸ್ಥಳೀಯರು ಅಸ್ವಸ್ಥಗೊಂಡಿರುವ ವೈಕುಂಠ ಅವರ ಫೋಟೋ ಕ್ಲಿಕ್ಕಿಸಿ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರಹ ಪ್ರಕಟಿಸಿದ್ದರು. ಕೂಡಲೇ ಸಾಮಾಜಿಕ ಕಾರ್ಯಕರ್ತ ಜೋಯ್ ಕುಂದಾಪುರ ವೈಕುಂಠ ಅವರನ್ನು ೧೦೮ ಆಂಬುಲೆನ್ಸ್ ಮೂಲಕ ಉಡುಪಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈಕುಂಠ ಅಸ್ವಸ್ಥಗೊಂಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ವೈಕುಂಠ ಅವರಿಗೆ ತುರ್ತು ಚಿಕಿತ್ಸೆ ನೀಡಲು ಸ್ಥಳೀಯ ಯುವಕರು ಮುಂದಾಗಿದ್ದು, ನೆಟ್ಟಿಗ ರಂಜಿತ್ ಹೆಂಗವಳ್ಳಿ, ವಿನಯ್ಚಂದ್ರ ಸಾಸ್ತಾನ ಮೊದಲಾದವರು ವೈಕುಂಠ ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಶ್ರಮಿಸಿದ್ದಾರೆ.
ಪಶು ಆಸ್ಪತ್ರೆಯೇ ಮನೆ:
ಮಾನಸಿಕವಾಗಿ ಅಸ್ವಸ್ಥಗೊಂಡು ಮನೆ ತ್ಯಜಿಸಿದ ವೈಕುಂಠ ಕಳೆದ ಕೆಲ ವರ್ಷಗಳಿಂದ ಕುಂದಾಪುರದ ಆಸುಪಾಸಿನಲ್ಲಿ ತಿರುಗಾಡಿ ಅವರಿವರು ಕೊಟ್ಟ ಹಣದಲ್ಲಿ ಊಟ ಮಾಡಿ ಶಾಸ್ತ್ರೀ ಸರ್ಕಲ್ನಲ್ಲಿರುವ ಇಂದಿರಾ ಕ್ಯಾಂಟೀನ್ ಹಿಂಬದಿಯ ಪಶು ಆಸ್ಪತ್ರೆಯ ಆವರಣದಲ್ಲಿ ಮಲಗಿ ದಿನ ಕಳೆಯುತ್ತಿದ್ದರು.
ಟ್ರೋಲ್ ಪೇಜ್ನಲ್ಲಿ ವೈಕುಂಠನ ಹವಾ:
ಮೂರ್ನಾಲ್ಕು ವರ್ಷಗಳಿಂದ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ವೈಕುಂಠ ಅವರು ಹಾಡಿರುವ ಕೆಲವು ಗೀತೆಗಳು ಸಾಕಷ್ಟು ವೈರಲ್ ಆಗಿದ್ದವು. ಆ ಬಳಿಕ ವೈಕುಂಠ ಕುಂದಾಪುರ ಜನತೆಗೆ ಚಿರಪರಿಚಿತರಾಗಿದ್ದರು. ಕುಂದಾಪುರದ ಹಲವು ಟ್ರೋಲ್ ಪೇಜ್ಗಳಲ್ಲಿ ವೈಕುಂಠ ಅವರ ಚಿತ್ರಗಳು, ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ಕುಂದಾಪುರದ ಆಸುಪಾಸಿನಲ್ಲಿ ವೈಕುಂಠ ಅವರನ್ನು ನೋಡಿದಾಕ್ಷಣ ಎಲ್ಲರೂ ಅವರನ್ನು ಸಲುಗೆಯಿಂದ ಕರೆದು ಮಾತಾಡಿಸುತ್ತಿದ್ದರು. ಕೆಲ ಟ್ರೋಲ್ ಪೇಜ್ಗಳಲ್ಲಿ ವೈಕುಂಠ ಅವರಿಗೆ ರಾಕ್ಸ್ಟಾರ್ ಎಂಬ ಬಿರುದು ನೀಡಲಾಗಿದ್ದು, ಅವರನ್ನು ಹೀರೋ ಎಂಬಂತೆಯೂ ಬಿಂಬಿಸಲಾಗಿತ್ತು.
ಕೆಟ್ಟದ್ದಕ್ಕೂ ಬಳಕೆ:
ಕೆಲವರು ವೈಕುಂಠ ಅವರ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸಿದರೆ ಇನ್ನೂ ಕೆಲವರು ಅವರನ್ನು ಕೆಟ್ಟ ವಿಷಯಗಳಿಗೂ ಬಳಸಿಕೊಳ್ಳುತ್ತಿದ್ದಾರೆ. ಹಣದ ಆಮೀಷ ತೋರಿಸಿ ತಮಗೆ ಬೇಕಾದ ಹಾಗೆ ಅವರಿಂದ ಮಾತನಾಡಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು, ಇನ್ನುಕೆಲವರು ಮಧ್ಯಪಾನ ಮಾಡಿಸಿ ಅವರಿಂದ ಅವಾಚ್ಯ ಶಬ್ದಗಳಿಂದ ತಮ್ಮ ಸ್ನೇಹಿತರಿಗೆ ಬಯ್ಯಲು ಹೇಳಿ ವಿಕೃತ ಆನಂದ ಪಡುತ್ತಿದ್ದರು.
ವೈಕುಂಠನ ನೆರವಿಗೆ ಎಎನ್ಕೆಎಮ್ ಟ್ರೋಲ್ ಪೇಜ್:
ವೈಕುಂಠ ಆಸ್ಪತ್ರೆಗೆ ದಾಖಲಾದ ತಕ್ಷಣವೇ ಕುಂದಾಪುರದ ಟ್ರೋಲ್ ಪೇಜ್ಗಳಲ್ಲೊಂದಾದ ನಮ್ಮ ಕುಂದಾಪುರ ಮೆಮ್ಸ್ ನೆರವಿಗೆ ಧಾವಿಸಿದೆ. ವೈಕುಂಠನ ಆಸ್ಪತ್ರೆಗೆ ದಾಖಲಿಸಿದವರ ನಿರಂತರ ಸಂಪರ್ಕದಲ್ಲಿರುವ ಎಎನ್ಕೆಎಮ್ ಟ್ರೋಲ್ ಪೇಜ್ ಎಡ್ಮಿನ್ಗಳು, ವೈಕುಂಠ ಅವರ ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ನೆರವು ಕೋರಿದ್ದಾರೆ. ಅಲ್ಲದೇ ತಮ್ಮ ಸ್ನೇಹವಲಯದಲ್ಲೂ ಹಣ ಹೊಂದಿಸುತ್ತಿದ್ದಾರೆ.ವೈಕುಂಠ ಪ್ರತಿಭಾವಂತ ಯುವಕ. ವೈಕುಂಠನ ಹಾಡಿಗೆ ನಾವೆಲ್ಲರೂ ತಲೆದೂಗುತ್ತೇವೆ. ಆತನ ಒಳತಿಗಾಗಿ ಅವನ ಪ್ರತಿಭೆಯನ್ನು ಬಳಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಆತನನ್ನು ವ್ಯಂಗ್ಯವಾಗಿ ಬಳಸಿಕೊಂಡಿದ್ದೆ ಹೆಚ್ಚು. ವೈಕುಂಠನನ್ನು ವ್ಯಂಗ್ಯವಾಗಿ ಯಾರು ಬಳಸಿಕೊಂಡಿದ್ದಾರೋ ಆತನ ರಕ್ಷಣೆ ಅವರು ಬಂದಿಲ್ಲ. ವ್ಯಂಗ್ಯಕ್ಕೆ ಬಳಸಿಕೊಳ್ಳುವವರು ಆತನ ರಕ್ಷಣೆಗೆ ಬಂದಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ವೈಕುಂಠ ಬಹುಬೇಗ ಚೇತರಿಕೆಯಾಗಿ ಮರಳಿ ಬರಲಿ ಎನ್ನುತ್ತಾರೆ ಕಲಾಕ್ಷೇತ್ರ ಕುಂದಾಪುರದ ಸಂಚಾಲಕ ಕಿಶೋರ್ ಕುಮಾರ್