ಕಟ್‌ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು, ನಗದು ಹೊತ್ತೊಯ್ದರು

ಕುಂದಾಪುರ: ತಾಲೂಕಿನ ಕಟ್‌ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳನೋರ್ವ ನಗದು ದೋಚಿ ಪರಾರಿಯಾಗಿದ್ದು, ಘಟನೆ ಮಂಗಳವಾರ ಬೆಳಿಗ್ಗೆ ಕಳ್ಳತನ ಬೆಳಕಿಗೆ ಬಂದಿದೆ.

ನಸುಕಿನ ಜಾವ ಮೂರು ಹದಿನೈದರ ಸುಮಾರಿಗೆ ಕೊಡೆ ಮತ್ತು ಚೀಲವೊಂದನ್ನು ಹಿಡಿದು ಬೀಗ ಒಡೆದು ದೈವಸ್ಥಾನದ ಒಳಪ್ರವೇಶಿಸಿದ ಕಳ್ಳ ಕಾಣಿಗೆ ಡಬ್ಬಿ ಒಡೆದು ನಗದು ದೋಚಿ, ಅಲ್ಲೇ ಸಮೀಪದಲ್ಲಿರುವ ಇನ್ನೊಂದು ಡಬ್ಬಿಯನ್ನು ಕೊಂಡೊಯ್ದಿದ್ದಾನೆ. ಕಳ್ಳ ದೈವಸ್ಥಾನದ ಅನತಿ ದೂರದಲ್ಲಿರುವ ರೈಲ್ವೆ ರಸ್ತೆಯ ಸಮೀಪದಲ್ಲಿ ಕಾಣಿಕೆ ಡಬ್ಬಿ, ಚಿಲ್ಲರೆ ಹಣ ಹಾಗೂ ಕೃತ್ಯಕ್ಕೆ ಬಳಸಿರುವ ಕಬ್ಬಿಣದ ಸಲಾಕೆಗಳನ್ನು ಬಿಟ್ಟು ಪರಾರಿಯಾಗಿದ್ದಾನೆ.

ಕಳ್ಳನ ಚಲನವಲನ ದೈವಸ್ಥಾನದಲ್ಲಿ ಅಳವಡಿಸಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳ ದೈವಸ್ಥಾನ ಒಳಪ್ರವೇಶಿಸುವಾಗ ಕೈಯ್ಯಲ್ಲಿದ್ದ ಕೊಡೆ ಮುಖಕ್ಕೆ ಅಡ್ಡಲಾಗಿ ಹಿಡಿದುಕೊಂಡಿದ್ದಾನೆ. ಕಬ್ಬಿಣದ ರಾಡ್‌ನಿಂದ ಕಾಣಿಕೆ ಡಬ್ಬಿ ಒಡೆಯುವ ಸಂದರ್ಭದಲ್ಲಿ ಕಳ್ಳನ ಮುಖಚಹರೆ ಪತ್ತೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಕೃತ್ಯ ನಡೆಸಿ ಆ ಬಳಿಕ ಇನ್ನೊಂದು ಕಾಣಿಕೆ ಹುಂಡಿಯನ್ನು ಅಲ್ಲಿಂದ ಕೊಂಡೊಯ್ದಿದ್ದಾನೆ.

ಕಳ್ಳತನವಾಗಿರುವ ನಗದು ಸುಮಾರು ೧೦,೦೦೦ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ದೈವಸ್ಥಾನದ ವಾರ್ಷಿಕ ಜಾತ್ರೆ ಮುಗಿದ ಬಳಿಕ ಆಡಳಿತ ಮಂಡಳಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಸಂಗ್ರಹಿಸಿತ್ತು. ಆ ಬಳಿಕ ಲಾಕ್‌ಡೌನ ಆರಂಭವಾಗಿದ್ದರಿಂದ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣ ಪಡೆದಿರಲಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಹುಂಡಿಯಲ್ಲಿರುವ ಹಣ ಸಂಗ್ರಹಿಸಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅಷ್ಟರಲ್ಲಾಗಲೇ ಕಳ್ಳ ತನ್ನ ಕೈಚಳಕ ತೋರಿಸಿ ಹಣ ದೋಚಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಙರು ಆಗಮಿಸಿ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ರಾಜ್‌ಕುಮಾರ್ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿಸಿ ಟಿವಿಯ ದೃಶ್ಯಾವಳಿಗಳನ್ನು ಕಲೆಹಾಕಿ ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.