ಕುಂದಾಪುರ: ಸಾಮಾಜಿಕ ಅಂತರಕ್ಕೆ ಡೋಂಟ್‌ಕೇರ್: ಕೊನೆಗೂ ತಾತ್ಕಾಲಿಕ ಮಾರುಕಟ್ಟೆ ಸುವ್ಯವಸ್ಥೆಗೆ

ಕುಂದಾಪುರ: ಇಲ್ಲಿನ ಸಂಗಮ್ ಜಂಕ್ಷನ್‌ನ ರಾಷ್ಟೀಯ ಹೆದ್ದಾರಿ ಸಮೀಪದಲ್ಲೇ ಕಳೆದ ಕೆಲ ದಿನಗಳಿಂದ ಕಾರ್ಯಾಚರಿಸುತ್ತಿರುವ ತಾತ್ಕಾಲಿಕ ಮೀನು ಮಾರುಕಟ್ಟೆ ಸುವ್ಯವಸ್ಥೆಗೆ ತರುವಲ್ಲಿ ಕೊನೆಗೂ ತಾಲೂಕು ಆಡಳಿತ ಯಶಸ್ವಿಯಾಗಿದೆ.

ಲಾಕಡೌನ್ ಆದೇಶ ಜಾರಿಯಾದ ಬೆನ್ನಲ್ಲೇ ಕುಂದಾಪುರದ ಮೀನು ಮಾರ್ಕೆಟ್‌ನಲ್ಲಿ ಮೀನು ಮಾರಾಟಕ್ಕೆ ನಿರ್ಬಂದ ಹೇರಲಾಗಿತ್ತು. ಆದರೆ ಸಮಾಜಿಕ ಅಂತರ ಕಾಯ್ದುಕೊಂಡು ಬೇರೆಡೆ ಮೀನು ವ್ಯಾಪಾರ ನಡೆಸಲು ಅನುಮತಿ ನೀಡಿದ್ದರಿಂದ ಮೀನು ವ್ಯಾಪಾರಸ್ಥರು ಸಂಗಮ್ ಸಮೀಪದಲ್ಲಿ ಮೀನು ವ್ಯಾಪಾರಕ್ಕೆ ಮುಂದಾಗಿದ್ದರು. ಮೀನು ಮಾರಾಟ ಸಂದರ್ಭ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ನಿರ್ದೇಶನಗಳಿಲ್ಲದೆ ಹೆದ್ದಾರಿ ಬಳಿಯೇ ಪಾರ್ಕಿಂಗ್ ಮಾಡಿ ಮೀನು ಖರೀದಿಗೆ ಜನ ಮುಗಿಬೀಳುತ್ತಿದ್ದರು. ಬೆಳಗ್ಗಿನ ಸಮಯವಂತೂ ಗುಂಪು ಜನರು ಸೇರುವ ಕಾರಣ ಲಾಕ್‌ಡೌನ್ ಆದೇಶ ಸಂಪೂರ್ಣ ಹಳ್ಳಹಿಡಿದಿತ್ತು.

ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸ್, ಪುರಸಭೆಯವರ ಜಂಟಿಯಾಗಿ ಸಮರ್ಪಕ ವ್ಯವಸ್ಥೆ ಕಾರ್ಯ ನಡೆಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವೃತ್ತ, ಪೊಲೀಸ್ ಬ್ಯಾಂಡ್ ಬಳಸಿ ಭಾನುವಾರ ತಡರಾತ್ರಿಯವರೆಗೂ ಕುಂದಾಪುರ ಪಿಎಸ್‌ಐ ಹರೀಶ್ ಆರ್. ನಾಯ್ಕ್, ಎಎಸ್‌ಐ ಸುಧಾಕರ್ ಹಾಗೂ ಸಿಬ್ಬಂದಿಗಳು, ಪುರಸಭೆ ಸದಸ್ಯ ಶ್ರೀಧರ್ ಸೇರುಗಾರ್ ಮೊದಲಾದವರು ಆಯಕಟ್ಟಿನ ಜಾಗ ಸಿದ್ದಪಡಿಸಿ ಪ್ರತ್ಯೇಕ ಸರತಿ ಸಾಲು, ಅಂತರ ಕಾಯ್ದುಕೊಳ್ಳಲು ವೃತ್ತ ನಿರ್ಮಾಣ ಮಾಡಿದ್ದರು.

ಸೋಮವಾರ ಬೆಳಿಗ್ಗೆ ಮೀನು ಮಾರಾಟ ಎಂದಿಗಿಂತ ಸುಗಮವಾಗಿ ಸಾಗಿತ್ತು. ಪ್ರತ್ಯೇಕ ಸಾಲು, ನಿಲ್ಲಲು ವೃತ್ತಗಳು ಇದ್ದರಿಂದ ಜನರು ಸಾವಕಾಶವಾಗಿ ಆಗಮಿಸಿ ಖರೀದಿಯಲ್ಲಿ ತೊಡಗಿಸಿಕೊಂಡರು. ಸಂಗಮ್ ಜಂಕ್ಷನ್ ಬಳಿ ಹೆದ್ದಾರಿ ಸಮೀಪದ ಸರ್ವೀಸ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಸಮೀಪ ತರಕಾರಿ, ಹಣ್ಣು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಎಸಿ ರಾಜು ಕೆ. ವ್ಯವಸ್ತೆ ಪರಿಶೀಲಿಸಿದರು. ಸೂಕ್ತ ಬೆಲೆಗೆ ಮೀನು ಮಾರಾಟ ಮಾಡಿ, ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುವಂತೆ ಮೀನು ವ್ಯಾಪಾರಸ್ಥರಿಗೆ ಪಿಎಸ್‌ಐ ಹರೀಶ್ ಆರ್. ನಾಯ್ಕ್ ಸೂಚಿಸಿದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ಮೀನು ಖರೀದಿಗೆ ಬಂದ ಸಾರ್ವಜನಿಕರು ಪ್ರತ್ಯೇಕ ಸಾಲುಗಳಲ್ಲೇ ನಿಂತು ಮೀನು ಖರೀದಿಯಲ್ಲಿ ತೊಡಗಿಕೊಂಡಿರುವ ದೃಶ್ಯಗಳು ಕಂಡುಬಂದವು. ಹಲವು ದಿನಗಳಿಂದ ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ ತಾತ್ಕಾಲಿಕ ಮೀನು ಮಾರುಕಟ್ಟೆಯ ಅವ್ಯವಸ್ಥೆಗೆ ಕೊನೆಗೂ ಬ್ರೇಕ್ ಬಿದ್ದಿದೆ.