ಕುಂದಾಪುರ: ಖಾಸಗಿ ಕಾರಿನಲ್ಲಿ ಶಬರಿಮಲೆಯಾತ್ರೆಗೆ ತೆರಳುತ್ತಿದ್ದ ವೇಳೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳನ್ನು ತಡೆದ ಟ್ಯಾಕ್ಸಿ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿ ಕಾರನ್ನು ಪೊಲೀಸರಿಗೊಪ್ಪಿಸಿದ ಘಟನೆ ಕುಂದಾಪುರ ಶಾಸ್ತ್ರೀವೃತ್ತದಲ್ಲಿ ನಡೆದಿದೆ.
ಬೈಂದೂರಿನ ಪಡುವರಿಯ ಏಳು ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗುರುವಾರ ಖಾಸಗಿ ನೋಂದಣಿಯ ಇನ್ನೋವಾ ಕಾರಿನಲ್ಲಿ ಶಬರಿಮಲೈ ಯಾತ್ರೆಗೆ ತೆರಳುತ್ತಿದ್ದರು. ಖಾಸಗಿ ವಾಹನದಲ್ಲಿ ಬಾಡಿಗೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ಹಾಗೂ ಉಡುಪಿ ಟ್ಯಾಕ್ಸಿ ಅಸೋಶಿಯೇಶನ್ ಸಂಘಟನೆಯ ಸದಸ್ಯರು ಶಾಸ್ತ್ರೀವೃತ್ತದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ತೀವ್ರ ತರಾಟೆಗೆ ತೆಗೆದುಕೊಂಡರು.
ತನ್ನ ನೆರೆಮನೆಯವರು ಕರೆದ ಕಾರಣ ಆತ್ಮೀಯತೆಯ ನೆಲೆಯಲ್ಲಿ ಬಂದಿದ್ದೇನೆ ಎಂಬ ಕಾರು ಮಾಲಕನ ಮಾತಿಗೆ ಆಕ್ಷೇಪಿಸಿದ ಟೂರಿಸ್ಟ್ ಚಾಲಕರು ಈ ಬಗ್ಗೆ ಸಮೀಪದ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಆಗ್ರಹಿಸಿದರು. ಈ ವೇಳೆಯಲ್ಲಿ ಸಂಚಾರ ಠಾಣೆಯ ಮುಂಭಾಗ ಕಾರು ಮಾಲಕ, ಅಯ್ಯಪ್ಪ ಮಾಲಾಧಾರಿಗಳು ಹಾಗೂ ಟೂರಿಸ್ಟ್ ಚಾಲಕರ ನಡುವೆ ಕೆಲಹೊತ್ತು ವಾಗ್ವಾದ ನಡೆಯಿತು. ಬಳಿಕ ಕುಂದಾಪುರ ಸಂಚಾರಿ ಠಾಣೆಯ ಠಾಣಾಧಿಕಾರಿ ಸುದರ್ಶನ್ ಕಾರನ್ನು ವಶಕ್ಕೆ ಪಡೆದು ಆರ್‌ಟಿಓ ಅಧಿಕಾರಿಗಳಿಗೆ ಕಾರನ್ನು ಒಪ್ಪಿಸುವುದಾಗಿ ಭರವಸೆ ನೀಡಿದರು. ಬಳಿಕ ಅಯ್ಯಪ್ಪ ವೃತಾಧಾರಿಗಳು ಇನ್ನೊಂದು ಟೂರಿಸ್ಟ್ ವಾಹಾಣ ಮಾಡಿಕೊಂಡು ಶಬರಿಮಲೆ ಯಾತ್ರೆ ಮುಂದುವರಿಸಿದರು.
ವೃತಾಧಾರಿಗಳಿಗೆ ನೆರವಾದ ಪ್ರತಿಭಟನಾಕಾರರು!:
ಟೂರಿಸ್ಟ್ ಚಾಲಕರ ದಿಢೀರ್ ಪ್ರತಿಭಟನೆಯಿಂದಾಗಿ ಅಯ್ಯಪ್ಪ ವೃತಾಧಾರಿಗಳಿಗೆ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಂಚಾರಿ ಪೊಲೀಸರು ಕಾರನ್ನು ವಶಕ್ಕೆ ಪಡೆದ ಬಳಿಕ ಕಾರಿನ ಮೇಲಿದ್ದ ಇರುಮುಡಿಗಳನ್ನು ಇಳಿಸಲಾಯಿತು. ಬದಲಿ ವಾಹನ ಬರುವ ತನಕವೂ ಇರುಮುಡಿ ಹಾಗೂ ವೃತಾಧಾರಿಗಳ ಇನ್ನಿತರ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಪ್ರತಿಭಟನಾ ನಿರತ ಟ್ಯಾಕ್ಸಿ ಚಾಲಕರು ತಮ್ಮ ವಾಹನಗಳಲ್ಲಿ ಇರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.
ಒಮ್ಮೆ ದಂಡ ಕಟ್ಟಿದರೆ ಬುದ್ದಿ ಬರುತ್ತದೆ: ಟ್ಯಾಕ್ಸಿ ಚಾಲಕರು
ಅಯ್ಯಪ್ಪ ಮಾಲಾಧಾರಿಗಳ ಸಮೇತ ಕಾರನ್ನು ಠಾಣೆಗೆ ಕರೆತಂದ ಟೂರಿಸ್ಟ್ ಚಾಲಕರು ಟ್ರಾಫಿಕ್ ಠಾಣಾಧಿಕಾರಿ ಸುದರ್ಶನ್ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ತಾಲೂಕಿನ ಎಲ್ಲಾ ಕಡೆಗಳಲ್ಲೂ ಖಾಸಗಿ ವಾಹನ ಮಾಲಕರು ತಮ್ಮ ಕಾರುಗಳನ್ನು ಬಾಡಿಗೆ ಬಿಡುತ್ತಿದ್ದು, ಟೂರಿಸ್ಟ್ ಚಾಲಕರೆಲ್ಲರಿಗೂ ಬಾಡಿಗೆ ಇಲ್ಲದಂತಾಗಿದೆ. ಬೃಹತ್ ಮೊತ್ತದಲ್ಲಿ ಟ್ಯಾಕ್ಸ್, ಇನ್ಸೂರೆನ್ಸ್ ಕಟ್ಟುವುದು ಟೂರಿಸ್ಟ್ ಚಾಲಕರು. ಬಾಡಿಗೆ ಮಾಡುವುದು ಮಾತ್ರ ಖಾಸಗಿ ವಾಹನ ಮಾಲಕರು. ಬಾಡಿಗೆ ಇಲ್ಲದೇ ಟೂರಿಸ್ಟ್ ಚಾಲಕರ ಕುಟುಂಬ ಬೀದಿಗೆ ಬೀಳುತ್ತಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಆದರೂ ಈ ಬಗ್ಗೆ ಯಾರೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಟೂರಿಸ್ಟ್ ಚಾಲಕರು ಆರೋಪಿಸಿದರು.
ಈ ವೇಳೆಯಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್‌ನ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ಗುರುರಾಜ್, ಉಡುಪಿ ಟ್ಯಾಕ್ಸಿ ಅಸೋಶಿಯೇಶನ್‌ನ ನಾಗರಾಜ್, ಅರುಣ್, ರತ್ನಾಕರ್,ಸಂತೋಷ, ಅಕ್ಷಯ್, ಸತೀಶ, ಶ್ರೀಧರ, ಅಶೋಕ್ ಗುಲ್ವಾಡಿ, ಸಂತೋಷ ಕೆ, ಪ್ರಶಾಂತ, ಕುಂದಾಫುರ ಪಾರಿಜಾತ ಟ್ಯಾಕ್ಸಿ ನಿಲ್ದಾಣದ ಚಾಲಕ-ಮಾಲಕರು ಇದ್ದರು.