ಕುಂದಾಪುರ: ಹಳ್ನಾಡುವಿನಲ್ಲಿರುವ ಮರಳು ದಾಸ್ತಾನು ಕೇಂದ್ರದಲ್ಲಿ ಮರಳು ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ಮರಳು ಹಾಗೂ ಸಾಗಾಟ ವಾಹನಕ್ಕೆ ಈಗಾಗಲೇ ದರಪಟ್ಟಿ ನೀಡಿದ್ದರೂ ಮರಳು ವಿತರಕರು ತಮ್ಮ ಪರಿಚಯಸ್ಥರ ಲಾರಿಗಳನ್ನೇ ನಿಲ್ಲಿಸಿ ಮರಳಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡುತ್ತಿದ್ದಾರೆ ಎಂದು ತಾ.ಪಂ ಸದಸ್ಯರು ಆರೋಪಿಸಿದ್ದಾರೆ.
ಮಂಗಳವಾರ ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮರಳು ವಿತರಣೆ ಗೊಂದಲದ ಬಗ್ಗೆ ವಾದ-ಪ್ರತಿವಾದ ನಡೆಯಿತು. ಮರಳು ವಿತರಣಾ ಕೇಂದ್ರದಲ್ಲಿ ದರ ನಿಗಧಿಗಿಂತ ಹೆಚ್ಚುವರಿ ಸುಮಾರು ರೂ. 10,000ದ ತನಕ ಹಣ ಪಡೆಯಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಯ ಗಮನ ಸೆಳೆದರೂ ಪರಿಸ್ಥಿತಿ ಬದಲಾಗಿಲ್ಲ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕುಂದಾಪುರ ಹಾಗೂ ಬೈಂದೂರು ಶಾಸಕರ ನೇತೃತ್ವದಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಯಿತು. ಅಲ್ಲದೇ ಮರಳು ವಿತರಣೆ ಸಮರ್ಪಕವಾಗಿ ನಡೆಯುವಂತೆ ನೋಡಲು ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ನೇತೃತ್ವದಲ್ಲಿ ಮರಳು ಕಣ್ಗಾವಲು ಸಮಿತಿ ರಚಿಸಿ ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಿ ಸಮಸ್ಯೆ ಬಗೆಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಆಲೂರು ಕೆಂಪುಕಲ್ಲು ಗಣಿ ದಾಳಿಯ ಬಗ್ಗೆ ಸದಸ್ಯೆ ಇಂದಿರಾ ಶೆಟ್ಟಿ ಮಾತನಾಡಿ, ಆಲೂರು ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕೆಂಪುಕಲ್ಲು ಗಣಿ ನಡೆಸಲು ಅವಕಾಶ ಮಾಡಿಕೊಡಬೇಕು. ಕಲ್ಲುಕ್ವಾರಿ ನಿಂತಿದ್ದರಿಂದ ಬಡವರಿಗೆ ಕೆಲಸ ಇಲ್ಲದಂತಾಗಿದೆ. ಕಲ್ಲುಕ್ವಾರಿ ನಿಯಮಗಳನ್ನು ಸರಳೀಕರಿಸಿ ಕೆಂಪುಕಲ್ಲು ಗಣಿಗಾರಿಕೆಗೆ ಮತ್ತೆ ಅವಕಾಶ ಮಾಡಿಕೊಡಬೇಕು ಎಂದರು.
ದಾಳಿ ನಡೆಸುವಾಗ ಏಕೆ ಮಾಹಿತಿ ಕೊಟ್ಟಿಲ್ಲ!:
ಹಿಂದೆಲ್ಲಾ ದಾಳಿ ಮಾಡುವಾಗ ಮಾಹಿತಿಕೊಟ್ಟು ಅಧಿಕಾರಿಗಳು ದಾಳಿ ನಡೆಸುತ್ತಿದ್ದರು ಎಂದು ಕಾರ್ಮಿಕರು ನನ್ನಲ್ಲಿ ಹೇಳಿದ್ದಾರೆ. ಪ್ರತೀ ಬಾರಿ ಮಾಹಿತಿ ನೀಡಿ ದಾಳಿ ನಡೆಸುವವರು ಈ ಭಾರಿ ಮಾಹಿತಿ ನೀಡದೇ ದಾಳಿ ನಡೆಸಿದ್ದು ಏಕೆ ಎಂಬ ಸದಸ್ಯೆ ಇಂದಿರಾ ಶೆಟ್ಟಿಯವರ ಪ್ರಶ್ನೆ ಇತರೆ ಸದಸ್ಯರನ್ನು ನಗೆಗಡಲಲಿ ತೇಲುವಂತೆ ಮಾಡಿತು.
ಇದಕ್ಕೆ ಪ್ರತ್ಯುತ್ತರ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹೇಶ್, ಜಿಲ್ಲೆಯಲ್ಲಿ ಒಂದು ಕೆಂಪುಕಲ್ಲು ಗಣಿಗಾರಿಕೆ ಹೊರತುಪಡಿಸಿ ಉಳಿದೆಲ್ಲ ಗಣಿಗಾರಿಕೆಯೂ ಅಕ್ರಮವಾಗಿ ನಡೆಯುತ್ತಿದೆ. ಗಣಿ ನಡೆಸುವವರಿಗೆ ಪರವಾನಿಗೆ ಪಡೆಯುವಂತೆ ಸೂಚಿಸಿದ್ದು ಎಲ್ಲರೂ ಅರ್ಜಿ ನೀಡಿದ್ದಾರೆ. ಆದರೆ ಯಾರೂ ಹಣ ಪಾವತಿಸಿಲ್ಲ. ಕೃಷಿ ಉದ್ದೇಶಕ್ಕಾಗಿ ಗಣಿಗಾರಿಕೆಗೆ ಅನುಮತಿ ನೀಡುವುದಾದರೆ ತಹಶೀಲ್ದಾರ್ ಎನ್ಓಸಿ ನೀಡಿದ ಬಳಿಕ ಪರವಾನಿಗೆ ನೀಡುತ್ತೇವೆ. ದಾಳಿ ವೇಳೆ ನಾವು ಯಾರಿಗೂ ಮಾಹಿತಿ ನೀಡಬೇಕಾದ ಅವಶ್ಯಕತೆ ಇಲ್ಲ. ಅಕ್ರಮ ನಡೆದಲ್ಲಿ ದಾಳಿ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
.
ಬೈಂದೂರಿನಲ್ಲಿ ಬ್ರೋಕರ್ಗಳಿಂದ ಲಂಚ: ಜಗದೀಶ್ ದೇವಾಡಿಗ ಆರೋಪ
ಸದಸ್ಯ ಜಗದೀಶ ದೇವಾಡಿಗ ಮಾತನಾಡಿ ಬೈಂದೂರಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಕೆಲವು ಬ್ರೋಕರ್ಗಳು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಇದನ್ನು ಕೂಡಲೇ ಬಗೆಹರಿಸಬೇಕು. ತಾಲೂಕು ಪಂಚಾಯಿತಿ ಅನುದಾನದಲ್ಲಿ ಅಳವಡಿಸಲಾಗಿರುವ ಸೋಲಾರ್ ಬೀದಿದೀಪಗಳು ಕೆಟ್ಟು ನಿಂತಿವೆ. ಅಳವಡಿಸಿರುವ ಕಂಪೆನಿ ಅದರ ದುರಸ್ತಿ ಮಾಡುತ್ತಿಲ್ಲ. ಇದಕ್ಕೆ ಜವಾಬ್ದಾರು ಯಾರು ಎಂದು ಪ್ರಶ್ನಿಸಿದರಲ್ಲದೇ ಹಿಂದಿನ ತಾಲೂಕು ಪಂಚಾಯಿತಿ ಸಭೆ ಮುಂದೂಡಿರುವುದು ಆಡಳಿತ ಪಕ್ಷದ ವೈಫಲ್ಯ ಎಂದು ಅವರು ಜರಿದರು. ಸದಸ್ಯ ಜಗದೀಶ್ ದೇವಾಡಿಗರ ಮಾತಿಗೆ ಕೆಲಕಾಲ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷೆ ಶ್ಯಾಮಲಾ ಕುಂದರ್ ಇದಕ್ಕೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ಪ್ರಕರಣಕ್ಕೆ ಇತಿಶ್ರೀ ಹಾಡಿದರು.
ಸಭೆಯಲ್ಲಿ ಆಧಾರ್ಕಾರ್ಡ್ ಕೇಂದ್ರ, ಸೋಲಾರ್ ವಿದ್ಯುತ್ ದೀಪ, ಸರ್ಕಾರಿ ಆಸ್ಪತ್ರೆಯಲ್ಲಿರುವ ದೇವಸ್ಥಾನ, 94ಸಿ, ಅಕ್ರಮ ಸಕ್ರಮ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಬಗೆಗೆ ಚರ್ಚೆ ನಡೆಯಿತು.ತಾಪಂ ಸದಸ್ಯರಾದ ಪುಪ್ಪರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಜ್ಯೋತಿ ಪುತ್ರನ್, ಮಾಲತಿ, ವಾಸುದೇವ ಪೈ ಸಭೆಯ ಗಮನ ಸೆಳೆದರು.
ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಪ್ರಭಾರ ಇಓ ಡಾ. ನಾಗಭೂಷಣ ಉಡುಪ ಹಾಗೂ ಬೈಂದೂರು ತಾಪಂ ಇಓ ಭಾರತಿ ಇದ್ದರು.