ಕುಂದಾಪುರ : ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಯವರ ಆದೇಶದಂತೆ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತಂತೆ ಶನಿವಾರ ಸಂಜೆ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್. ಮಧುಕೇಶ್ವರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಎಸಿ ಡಾ| ಎಸ್. ಮಧುಕೇಶ್ವರ್, ಈ ವರ್ಷ ಬರದ ವಸ್ತುಸ್ಥಿತಿ ಉಡುಪಿ ಜಿಲ್ಲೆಗೂ ತಟ್ಟಿದ್ದು, ಇದರಿಂದ ನಾವು ಎಚ್ಚೆತ್ತುಕೊಳ್ಳುವ ಸಲುವಾಗಿ ಕನಿಷ್ಠ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ಮತ್ತು ಜನರಿಗೆ ಪರಿಸರದ ಬಗ್ಗೆ ಜಾಗೃತಿಯನ್ನುಂಟು ಮಾಡುವ ಪ್ರಯತ್ನವನ್ನು ಮಾಡಬೇಕಾಗಿದೆ. ಹೀಗಾಗಿ ಜೂ. ೫ ರ ಪರಿಸರ ದಿನಾಚರಣೆ ಪ್ರಯುಕ್ತ ಒಂದು ವಾರವಿಡೀ ಪರಿಸರಕ್ಕೆ ಪೂರಕವಾಗುಂತಹ ಕಾರ್‍ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಪರಿಸರ ಕಾರ್ಯಕ್ರಮಗಳಲ್ಲಿ ಶಾಲಾ- ಕಾಲೇಜು ಮಕ್ಕಳಿಗೆ ಕಾಲ್ನಡಿಗೆ ಜಾಥ, ಪರಿಸರಕ್ಕೆ ಪೂರಕವಾಗುವಂತಹ ಸೇವೆ ಮಾಡುವವರನ್ನು ಗುರುತಿಸಿ ಗೌರವಿಸುವುದು, ವಿವಿಧ ಸಂಘ-ಸಂಸ್ಥೆಗಳ ನೆರವು, ಸಸಿ ನೆಡುವುದು, ಕೆರೆ ಪುನಶ್ಚೇತನ, ಬೀಚ್ ಸ್ವಚ್ಛತೆ, ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಆಯೋಜಿಸಬೇಕು ಎಂದು ಡಾ. ಮಧುಕೇಶ್ವರ್ ಕರೆ ನೀಡಿದರು.
ತಾಲೂಕಿನಲ್ಲಿ ಸುಮಾರು ೩೫ ಕೆರೆಗಳು ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡುವ ಕಾರ್ಯ ಇದೇ ತಿಂಗಳಲ್ಲಿ ಕಂದಾಯ ಇಲಾಖೆ ಮಾಡಲಿದೆ. ಒತ್ತಾಯಪೂರಕವಾಗಿ ಜನರನ್ನು ಅಣಿಗೊಳಿಸದೆ ಅವರೇ ಪ್ರೀತಿಯಿಂದ ಪರಿಸರದ ಮೇಲೆ ಕಾಳಜಿ ಇಟ್ಟು ಪರಿಸರ ಕಾರ್ಯಕ್ರಮಗಳಲ್ಲಿ ತೊಡಗಿಸುವಂತೆ ಪ್ರಯತ್ನಿಸಬೇಕು ಎಂದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಕುಂದಾಪುರ ಉಪ ವಿಭಾಗದ ಆರ್‌ಎಫ್‌ಒ ಲೋಹಿತ್ ಕುಮಾರ್, ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು, ವಿವಿಧ ಗ್ರಾ.ಪಂಗಳ ಪಿಡಿಒ, ಕಾರ್ಯದರ್ಶಿಗಳು, ಅಧಿಕಾರಿಗಳು ಸಭೆಯಲ್ಲಿ ಇದ್ದರು.