ಕುಂದಾಪುರ: ಗಲಾಟೆ ಗದ್ದಲದಲ್ಲೇ ಮುಳುಗಿದ ತಾ.ಪಂ ಸಾಮಾನ್ಯ ಸಭೆ ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಧಾನ

ಕುಂದಾಪುರ: ಆಡಳಿತ ಪಕ್ಷದ ಸದಸ್ಯರು ಹಾಗೂ ಅಧ್ಯಕ್ಷರ ನಡುವಿನ ಸಮನ್ವಯದ ಕೊರತೆಯಿಂದಾಗಿ ಶುಕ್ರವಾರ ನಡೆದ ತಾ.ಪಂ ಸಾಮಾನ್ಯ ಸಭೆ ಗಲಾಟೆ-ಗದ್ದಲದಲ್ಲೇ ಮುಗಿಯಿತು. ಪ್ರತೀ ತಾ.ಪಂ ಸಭೆಯಲ್ಲೂ ಅಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ಅಸಮಧಾನ ಹೊರಹಾಕುವ ಆಡಳಿತ ಪಕ್ಷದ ಸದಸ್ಯರು ಈ ಭಾರಿಯೂ ವಿರೋಧ ಪಕ್ಷದ ಕೆಲಸ ನಿರ್ವಹಿಸಿ ಅಧ್ಯಕ್ಷರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕು ಪಂಚಾಯಿತಿ ಡಾ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳ ಅಸಮರ್ಪಕ ಉತ್ತರ, ಕುಂದಾಪುರ ತಾಲೂಕು ಆಸ್ಪತ್ರೆ ಆರೋಗ್ಯಾಧಿಕಾರಿ ವಿರುದ್ಧದ ನಿರ್ಣಯ ಜಿಪಂಗೆ ಕಳುಹಿಸದ್ದಕ್ಕೆ ಅಸಮಾಧಾನ, ತಾಪಂ ಸಾಮಾನ್ಯ ಸಭೆಯ ಕಾರ್ಯಸೂಚಿ ವಿಳಂಬಕ್ಕೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ತಾಲೂಕು ಆಸ್ಪತ್ರೆ ಆರೋಗ್ಯ ವೈದ್ಯಾಧಿಕಾರಿ ವಿರುದ್ಧ ಹಲವಾರು ಗಂಭೀರ ಆರೋಪಗಳಿವೆ. ಅವರಿಗೆ ಕಣ್ಣು ಕಾಣಿಸುವುದಿಲ್ಲ ಎಂಬ ಕಾರಣ ಮುಂದಿಟ್ಟು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೇ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿನ ದೇವಸ್ಥಾನದಲ್ಲಿ ನಡೆದ ಅವ್ಯಹಾರಗಳ ಬಗ್ಗೆಯೂ ಹಿಂದಿನ ಸಭೆಗಳಲ್ಲಿ ಚರ್ಚೆ ನಡೆದಿತ್ತು. ಉತ್ತರ ನೀಡಲು ಡಿಎಚ್‌ಓ ಅವರನ್ನು ಕರೆಸಬೇಕೆಂದು ನಿರ್ಣಯ ಮಾಡಲಾಗಿತ್ತು. ಆದರೆ ಈ ಬಗ್ಗೆ ಅವರಿಗೆ ನೋಟೀಸು ಮಾಡದೇ ಸಭೆಯ ದಿಕ್ಕು ತಪ್ಪಿಸಲಾಗುತ್ತಿದೆ. ಆರೋಪಿತರಿಂದಲೇ ಆರೋಪಗಳ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು ಸಮಂಜಸವಲ್ಲ. ತಾಪಂ ನಿರ್ಣಯವನ್ನು ಸರಕಾರಕ್ಕೆ ಏಕೆ ಕಳುಹಿಸಿಲ್ಲ ಎಂದು ಸದಸ್ಯರಾದ ಪ್ರವೀಣಕುಮಾರ್ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಮಹೇಂದ್ರ ಪೂಜಾರಿ, ಕರಣ ಪೂಜಾರಿ ಧ್ವನಿಗೂಡಿಸಿದರು.

ತಾಪಂ ಅನ್ನು ಶಾಸಕರಿಗೆ ಅಡವಿಟ್ಟಿದ್ದೀರಾ: ಅಧ್ಯಕ್ಷೆಗೆ ಆಡಳಿತ ಪಕ್ಷದ ಸದಸ್ಯರಿಂದಲೇ ಪ್ರಶ್ನೆಗಳ ಸುರಿಮಳೆ:
ತಾಪಂ ಅಧ್ಯಕ್ಷೆ ಶ್ಯಾಮಲಾಕುಂದರ್, ಸರ್ಕಾರಿ ಆಸ್ಪತ್ರೆಯ ಬಗ್ಗೆ ನಿರ್ಣಯವನ್ನು ಜಿಪಂ ಹಾಗೂ ಆರೋಗ್ಯ ಸಚಿವರಿಗೆ ಕಳುಹಿಸುವ ಬಗ್ಗೆ ಶಾಸಕರ ಅಭಿಪ್ರಾಯ ಕೇಳಲಾಗಿತ್ತು. ಅವರು ಮೌಖಿಕವಾಗಿ ನಿರ್ಣಯ ಕಳುಹಿಸುವುದು ಬೇಡ ಎಂದಿದ್ದರಿಂದ ಕಳುಹಿಸಿರಲಿಲ್ಲ ಎಂದರು. ಇದರಿಂದ ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದರು. ಎಲ್ಲವನ್ನು ಶಾಸಕರನ್ನು ಕೇಳಿಯೇ ನಿರ್ಣಯ ತೆಗೆದುಕೊಳ್ಳುವುದಾದರೇ ತಾಲೂಕು ಪಂಚಾಯತ್ ಸಭೆ ನಡೆಸುವ ಉದ್ದೇಶವೇನಿದೆ. ತಾಪಂ ಅನ್ನು ಶಾಸಕರಿಗೆ ಅಡವಿಟ್ಟಿದ್ದೀರಾ. ಮಂತ್ರಿಗಳಗೆ, ಜಿಪಂ ನಿರ್ಣಯ ಕಳುಹಿಸಲು ಶಾಸಕರನ್ನು ಕೇಳುವುದಾದರೆ, ತಾಪಂ ಘನತೆ ಉಳಿಯುತ್ತಾ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೇ ವೈದ್ಯಾಧಿಕಾರಿ ಹೆಚ್ಚುವರಿಯಾಗಿ ಪಡೆದ ಹಣ ಹಿಂತಿರುಗಿಸಬೇಕು ಹಾಗೂ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷೆಗೆ ತಹಶೀಲ್ದಾರ್ ಸವಾಲು!:
ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯಗಳ ಚರ್ಚೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ತಹಶೀಲ್ದಾರರ ನಡುವೆ ನಡೆದ ವಾಗ್ವಾದದಲ್ಲಿ ತಹಶೀಲ್ದಾರರು ಕ್ಷಮಾಪಣೆ ಕೇಳುವಂತೆ ಅಧ್ಯಕ್ಷರು ಸೂಚಿಸಿದರು. ಅದರೆ ತಹಶೀಲ್ದಾರ ತಿಪ್ಪೆಸ್ವಾಮಿ ಅಧ್ಯಕ್ಷರ ಸೂಚನೆ ತಿರಸ್ಕರಿಸಿ ನಿರ್ಣಯ ಕೈಗೊಂಡು ಕ್ರಮಕೈಗೊಳ್ಳಿ. ಅದನ್ನು ಎದುರಿಸಲು ನಾನು ಸದಾಸಿದ್ಧ ಎಂದು ಸವಾಲೆಸೆದರು.
ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಬೈಂದೂರು ಇಓ ಭಾರತಿ, ಕುಂದಾಪುರ ಇಓ ಕೇಶವ ಶೆಟ್ಟಿಗಾರ್ ಇದ್ದರು.

ಚಿತ್ರ:
ಕುಂದಾಪುರ ತಾಪಂ ೧೯ನೇ ಸಾಮಾನ್ಯ ಸಭೆ ಅಧ್ಯಕ್ಷೆ ಶ್ಯಾಮಲಾ ಕುಂದರ್‌ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಇಒ ಭಾರತಿ ಹಾಗೂ ಕೇಶವ ಶೆಟ್ಟಿಗಾರ್ ಇದ್ದರು.
ಕುಂದಾಪುರತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾತಿನಜಟಾಪಟಿ ನಡೆಯಿತು.