ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿದ್ದ ರಾಘವೇಂದ್ರ ಗಾಣಿಗನನ್ನು ಬುಧವಾರ ಬೆಳಿಗ್ಗೆ ಕುಂದಾಪುರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನನ್ನು ಜಿಲ್ಲಾ ಸರ್ಜನ್ ನಿಗಾಕ್ಕೆ ಹಸ್ತಾಂತರಿಸಿದೆ.
ಪಾಕ್ ಪರ ಘೋಷಣೆ ಕೂಗಿದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗನಿಗೆ ಯಾರದ್ದಾದರೂ ಪ್ರೇರಣೆ ಇದೆಯೇ ಎಂಬಿತ್ಯಾದಿ ವಿಚಾರದ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರು.
ಆದರೆ ನ್ಯಾಯಾಲಯ ಆತನ ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಆರೋಪಿ ರಾಘವೇಂದ್ರ ಗಾಣಿಗನನ್ನು ಮಾರ್ಚ್ 13ರ ತನಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲು ಆದೇಶಿಸಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಅವರಿಗೆ ಒಪ್ಪಿಸಿ ಅವರ ನಿಗಾದಲ್ಲಿ ಇರಿಸುವಂತೆ ಸೂಚಿಸಲಾಗಿದೆ. ಮಾರ್ಚ್ 13ರವರೆಗೆ ನಿಗಾವಹಿಸಿ ಬಳಿಕ ನೀಡುವ ವೈದ್ಯರ ವರದಿಯ ಆಧಾರದ ಮೇಲೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೇ ಅಥವಾ ಪೊಲೀಸ್ ಕಸ್ಟಡಿಗೆ ನೀಡಬಕೇ ಎನ್ನುವ ಬಗ್ಗೆ ಸೂಚಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಇನ್ನು ಘಟನೆಗೆ ಸಂಬಂಧಿಸಿ ಸೋಮವಾರವೇ ಆರೋಪಿ ರಾಘವೇಂದ್ರ ಗಾಣಿಗನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಾರ್ಚ್ 16ರೊಳಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿ ರಾಘವೇಂದ್ರ ಗಾಣಿಗನ ಪರ ವಕೀಲ ಸಂತೋಷ ಕುಮಾರ್ ಶೆಟ್ಟಿ ವಾಧಿಸಿದ್ದರು.
ನನ್ ಮನಿಗ್ ಕರ್ಕಂಡ್ ಹೊಯ್ನಿ ಅಮ್ಮ: ಮಗುವಿನಂತೆ ಅತ್ತ ರಾಘವೇಂದ್ರ
ವಿಚಾರಣೆ ಮುಗಿಸಿ ಪೊಲೀಸರೊಂದಿಗೆ ನ್ಯಾಯಾಲಕಯದ ಹೊರ ಬೆಂಚಿನಲ್ಲಿ ಕೂತಿದ್ದ ಆರೋಪಿ ರಾಘವೇಂದ್ರ ಗಾಣಿಗ ತನ್ನ ಅಮ್ಮನನ್ನು ಕರೆದು, “ನಂಗ್ ಇಲ್ ಇಪ್ಪುಕ್ ಆತಿಲ್ಲ ಅಮ್ಮ.. ನನ್ ಈಗಳೇ ಮನಿಗ್ ಕರ್ಕಂಡ್ ಹೊಯ್ನಿ” (ನನಗಿಲ್ಲಿ ಇರಲು ಸಾಧ್ಯವಿಲ್ಲ.. ಈಗಲೇ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ) ಎಂದು ಪುಟ್ಟ ಮಗುವಿನಂತೆ ಅತ್ತ ದೃಶ್ಯ ಕೋರ್ಟ್‍ನಲ್ಲಿದ್ದವರ ಕಣ್ಣುಗಳಲ್ಲಿ ನೀರು ತರಿಸುವಂತೆ ಮಾಡಿತು. ತಾಯಿ, ಪತ್ನಿ, ತಂದೆ, ಕುಟುಂಬಿಕರು ಸೇರಿದಂತೆ ಎಲ್ಲರೂ ರಾಘವೇಂದ್ರ ಗಾಣಿಗನ ಮುಗ್ಧ ಮಾತಿಗೆ ಅಸಹಾಯಕತೆಯಿಂದ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ತಾಯಿ ಮತ್ತು ಪತ್ನಿ ರಾಘವೇಂದ್ರನ ಕಣ್ಣೀರೊರೆಸಿ, ತಲೆಸವರಿ ಸಮಧಾನಪಡಿಸಿದರು.
ನ್ಯಾಯಧೀಶರೆದುರು ಕೈಮುಗಿದು ನಿಂತ ರಾಘವೇಂದ್ರ ಗಾಣಿಗ:
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನ್ಯಾಯಧೀಶರೆದುರು ಕಟಕಟೆಯ ಮೇಲೆ ನಿಂತುಕೊಂಡಿದ್ದ ಆರೋಪಿ ರಾಘವೇಂದ್ರ ಗಾಣಿಗ ಎರಡು ಕೈಗಳನ್ನು ಮುಗಿದು ನಮಸ್ಕರಿಸಿ ನಿಂತುಕೊಂಡನು. ಈ ವೇಳೆಯಲ್ಲಿ ರಾಘವೇಂದ್ರನ ತಾಯಿ ಹಾಗೂ ಪತ್ನಿ ಕಣ್ಣೀರಾಗಿ ದೇವರಿಗೆ ಕೈಮುಗಿದು ಬೇಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದವು.












