ಕುಂದಾಪುರ: ಪೊಲೀಸರ ಬಸ್ಕಿ ಅಸ್ತ್ರ ಪಾಸ್: ಅನಗತ್ಯ ಓಡಾಟಕ್ಕೆ ಬಿತ್ತು ಕಡಿವಾಣ

ಕುಂದಾಪುರ: ಕಳೆದೆರಡು ದಿನಗಳಿಂದ ನಗರದಲ್ಲಿ ಅಗತ್ಯ ಕೆಲಸದ ಹೊರತು ಅನಗತ್ಯ ಓಡಾಟ ನಡೆಸುತ್ತಿರುವ ಸಾರ್ವಜನಿಕರಿಗೆ ಪೊಲೀಸರು ಬಸ್ಕಿ ಅಸ್ತೃ ಪ್ರಯೋಗಿಸಿದ ಬೆನ್ನಲ್ಲೇ ಇದೀಗ ನಗರದಲ್ಲಿ ಅನಗತ್ಯ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.

ಶುಕ್ರವಾರ ಬೆಳಗ್ಗಿನಿಂದಲೇ ಹಾಲು, ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸುವವರು ಒಬ್ಬೊಬ್ಬರಾಗಿಯೇ ಬರುತ್ತಿದ್ದರಿಂದ ವಾಹನಗಳ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಂತಾಗಿದೆ. ಎಂದಿನಂತೆ ಅಂಗಡಿಗಳು ಬಂದ್ ಆಗಿದ್ದು, ನಗರ ಪ್ರವೇಶದಲ್ಲಿ ಹಾಕಲಾದ ಎರಡೂ ಚೆಕ್‌ಪೋಸ್ಟ್‌ಗಳಲ್ಲಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯವಿರುವವರು ಸರಿಯಾದ ಕಾರಣ ಹೇಳಿ ಚೆಕ್‌ಪೋಸ್ಟ್‌ನಿಂದ ಮುಂದಕ್ಕೆ ಸಾಗಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ಮರಳಿ ಮನೆಗೆ ಮರಳಿದ್ದಾರೆ.

ನಗರದ ಕೆಲ ಮೆಡಿಕಲ್‌ಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಔಷಧಿ ಕೊಳ್ಳುವವರು ಸಾಲಾಗಿ ಸಾಕಷ್ಟು ಅಂತರಲದಲಿ ನಿಂತುಕೊಂಡ ದೃಶ್ಯಗಳು ಕಂಡುಬಂದಿದೆ. ತರಕಾರಿ ಅಂಗಡಿಗಳಲ್ಲೂ ಅಂಗಡಿ ಎದುರು ನಿಲ್ಲಲು ಹಾಕಿರುವ ವೃತ್ತದೊಳಗೆ ಸಾರ್ವಜನಿಕರು ನಿಂತಿಕೊಂಡು ತರಕಾರಿ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.