ಕುಂದಾಪುರ : ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ, ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಜನವಾದಿ ಮಹಿಳಾ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿಯ ನೇತ್ರತ್ವದಲ್ಲಿ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ, ಈಚೆಗೆ ಹೈದರ್‌ಬಾದ್‌ನಲ್ಲಿ ನಡೆದ ಪ್ರೀಯಾಂಕ ರೆಡ್ಡಿ ಅವರ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಲಾಯಿತು.
ಅತ್ಯಾಚಾರ ಹಾಗೂ ಕೊಲೆ ಮಾಡಿದವರನ್ನು ಕಾನೂನಿನ ಅಡಿಯಲ್ಲಿ ತನಿಖೆ ನಡೆಸದೆ ಏಕಾಏಕಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿರುವುದು ಕೂಡ ಅಪರಾಧ. ನಮ್ಮ ರಾಜ್ಯದಲ್ಲಿ ಈ ರೀತಿಯ ಅನೇಕ ಪ್ರಕರಣಗಳು ನಡೆದಿದೆ. ಅದರಲ್ಲಿ ಸೌಜನ್ಯ ಹಾಗೂ ರತ್ನಾ ಕೊಠಾರಿ ಅವರ ಸಾವು ನಡೆದಿದೆ. ಆದರೆ ಇದುವರೆಗೂ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ಕಾರ್ಯದರ್ಶಿ ಶೀಲಾವತಿ ಆರೋಪಿಸಿದರು.
ಸಭೆಯಲ್ಲಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿಯ ಸಹ ಸಂಚಾಲಕರಾದ ನಾಗರತ್ನ ನಾಡ, ಇಂದಿನ ದಿನಗಳಲ್ಲಿ ದಲಿತ ಸಮುದಾತದ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ದಲಿತ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಬಲ್ಕೀಸ್ ಬಾನು, ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಮುಖಂಡರಾದ ವೆಂಕಟೇಶ ಕೋಣಿ ಮಾತನಾಡಿದರು. ಸಿಐಟಿಯು ಸಂಘಟನೆಯ ರಾಜ್ಯ ಮುಖಂಡರಾದ ಕೆ.ಶಂಕರ, ಮಹಾಬಲ ವಡೇರಹೋಬಳಿ, ಜಿ.ಡಿ.ಪಂಜು, ದಲಿತ ಹಕ್ಕುಗಳ ಸಮಿತಿಯ ತಾಲ್ಲೂಕು ಸಂಚಾಲಕ ರವಿ ವಿ.ಎಂ ಹಾಗೂ ಪದ್ಮಾವತಿ ಇದ್ದರು.