ಕಫ್ರ್ಯೂ ವಿಧಿಸಿದ ಬಳಿಕ ಕುಂದಾಪುರದಲ್ಲಿ ದಾಖಲಾದ ಮೊದಲ ಪ್ರಕರಣ: ಪೊಲೀಸರೊಂದಿಗೆ ಉಡಾಫೆ ಮಾತನಾಡಿದ ಯುವಕ ಅಂದರ್

ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಕಫ್ರ್ಯೂ ಮೂರನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೆ ಪೊಲೀಸರ ಮಾತಿಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಯುವಕನೋರ್ವನ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇಲ್ಲಿನ ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ಶೇರುಗಾರ್(23) ಇದೀಗ ಪೊಲೀಸರ ಅತಿಥಿಯಾಗಿದ್ದು, ಕುಂದಾಪುರದಲ್ಲಿ ಕಫ್ರ್ಯೂ ನಿಯಮ ಉಲ್ಲಂಘಿಸಿದ ಪ್ರಥಮ ಪ್ರಕರಣವಾಗಿ ದಾಖಲಾಗಿದೆ.

ಗುರುವಾರ ಬೆಳಿಗ್ಗೆ ಎಸಿ ಸಮ್ಮುಖದಲ್ಲೇ ಕುಂದಾಪುರ ಶಾಸ್ತ್ರೀವೃತ್ತದ ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಬೈಕ್‍ನಲ್ಲಿ ಬಂದ ಯುವಕನೋರ್ವ ಪೊಲೀಸರ ಮಾತಿಗೆ ವಾಗ್ವಾದಕ್ಕಿಳಿದಿದ್ದಾನೆ.

ಡಿಸಿಗೆ ಕರೆ ಮಾಡುತ್ತೇನೆಂದು ಫೋನ್ ತೆಗೆದು ಪೊಲೀಸರೊಂದಿಗೆ ತಗಾದೆ ಎತ್ತಿದ ಯುವಕನ ನಡೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಅವರ ಆಕ್ರೋಶಕ್ಕೆ ಕಾರಣವಾಯಿತು. ನಾವಿಲ್ಲಿ ಕತ್ತೆ ಕಾಯಲಿಕ್ಕೆ ನಿಂತಿದ್ದೇವಾ? ಹಗಲು ರಾತ್ರಿ ನಿಮ್ಮ ಆರೋಗ್ಯಕ್ಕಾಗಿ ನಿದ್ದೆ ಬಿಟ್ಟು ಕರ್ತವ್ಯ ಮಾಡುತ್ತಿದ್ದೇವೆ ಎಂದು ಲಾಠಿ ಮೂಲಕ ಹೊಡೆಯಲು ಮುಂದಾದರು. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡೋದು ಎಷ್ಟರಮಟ್ಟಿಗೆ ಸರಿ? ಮಾಸ್ಕ್ ಇಲ್ಲದಿದ್ದರೆ ಕರ್ಚೀಫ್ ಇಲ್ಲವಾ ಎಂದಾಗ ಕರ್ಚೀಫ್ ಇಲ್ಲ. ಕರ್ಚೀಫ್ ತೆಗೆದುಕೊಳ್ಳಲು ಹಣವಿಲ್ಲ ಎಂದು ಉಡಾಫೆ ಮಾತನಾಡಿದ ಯುವಕನ ಮಾತಿಗೆ ಮತ್ತೆ ರೊಚ್ಚಿಗೆದ್ದ ಪಿಎಸ್‍ಐ ಮತ್ತೆ ಹೊಡೆಯಲಾರಂಭಿಸಿದರು. ಈ ವೇಳೆಯಲ್ಲಿ ಅಲ್ಲೇ ಸ್ಥಳದಲ್ಲಿದ್ದ ಎಸಿ ರಾಜು ಕೆ ಆತನ ಮೇಲೆ ಕೇಸು ಜಡಿದು ಒದ್ದು ಒಳಗೆ ಹಾಕಿ ಅನ್ನುತ್ತಿಂದ್ದಂತೆಯೇ ಯುವಕನನ್ನು ಪೊಲೀಸರು ಜೀಪಿನಲ್ಲಿ ಕೂರಿಸಿ ಠಾಣೆಗೆ ಕರೆದುಕೊಂಡು ಹೋದರು.

ಇದೀಗ ಕುಂದಾಪುರ ಠಾಣೆಯಲ್ಲಿ ಕಫ್ರ್ಯೂ ಆದೇಶ ಉಲ್ಲಂಗಿಸಿರುವ ಆರೋಪದಡಿಯಲ್ಲಿ ಯುವಕನ ಮೇಲೆ ಕೇಸು ದಾಖಲಾಗಿರುವ ಮೊದಲ ಪ್ರಕರಣವಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ಯುವಕನ ವಿರುದ್ದ ಐಪಿಸಿ ಸೆಕ್ಷನ್ 269 ಹಾಗೂ 353ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


-ಹರಿರಾಮ್ ಶಂಕರ್, ಎಎಸ್‍ಪಿ ಕುಂದಾಪುರ
ಗುರುವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ಕುಂದಾಪುರ ಉಪವಿಭಾಗದ ವ್ಯಾಪ್ತಿಯ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರನ್ನು ಸುಮ್ಮನೆ ಬಿಡೋದಿಲ್ಲ. ಇದು ಎಲ್ಲಾ ಸಾರ್ವಜನಿಕರಿಗೂ ಒಂದು ಪಾಠವಾಗಬೇಕು. ಕೆಲವರು ಸುಳ್ಳು ಹೇಳಿ ತಿರುಗಾಡುತ್ತಿದ್ದಾರೆ. ದಿನನಿತ್ಯ ವಸ್ತುಗಳ ಖರೀದಿಗಾಗಿ ಪದೇ ಪದೇ ಬರುವುದು ಒಳ್ಳೆಯದಲ್ಲ. ನಮ್ಮ ಆದೇಶವನ್ನೂ ಮೀರಿದರೆ ಅಂತವರ ಮೇಲೆ ಕಠಿಣ ಕಾನೂನುಕ್ರಮ ಜರುಗಿಸುತ್ತೇವೆ.