ಕುಂದಾಪುರ: ಸಾರಿಗೆ ಸಂಚಾರ ಮತ್ತಷ್ಟು ಬಿಗಿ: ಪೊಲೀಸರ ಹೊಸಕ್ರಮಕ್ಕೆ ಸಾರ್ವಜನಿಕರು ಕೆಂಡಾಮಂಡಲ

ಕುಂದಾಪುರ: ಲಾಕ್‌ಡೌನ್‌ಗೆ ಸಾರ್ವಜನಿಕರು ಹೊಂದಿಕೊಳ್ಳುತ್ತಿರುವ ಹೊತ್ತಲ್ಲೇ ಮಂಗಳವಾರ ಬೆಳಿಗ್ಗೆಯಿಂದ ಏಕಾಏಕಿ ನಗರದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿದ ಪೊಲೀಸರ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್-೧೯ ಹಿನ್ನೆಲೆ ಜಿಲ್ಲಾಡಳಿತವು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿಪಡಿಸಿದ ಅವಧಿಯಲ್ಲಿ ನಗರದಲ್ಲೆಲ್ಲೆಡೆ ವಾಹನ ದಟ್ಟಣೆಯಾಗುತ್ತಿದೆ ಎಂಬ ದೂರಿನ ಮೇರೆಗೆ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸರು ಈ ಹೊಸಕ್ರಮಕ್ಕೆ ಮುಂದಾಗಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ಚಿಕ್ಕನ್‌ಸಾಲ್, ಚರ್ಚ್ ರಸ್ತೆ ಹಾಗೂ ಶಾಸ್ತ್ರೀ ವೃತ್ತವನ್ನು ಹೊರತುಪಡಿಸಿ ಉಳಿದೆಲ್ಲಾ ಒಳ ರಸ್ತೆಗಳಿಗೆ ನಾಕಾಬಂಧಿ ವಿಧಿಸಿ ರಸ್ತೆಯನ್ನು ಸೋಮವಾರ ರಾತ್ರಿಯಿಂದಲೇ ಬಂದ್ ಮಾಡಲಾಗಿತ್ತು. ಚೆಕ್‌ಪಾಯಿಂಟ್ ಹಾಕಿರುವ ಮೂರು ರಸ್ತೆಗಳ ಪ್ರವೇಶದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದ ಪ್ರತಿಯೊಂದು ವಾಹನಗಳ ತಪಾಸಣೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆಯಲ್ಲಿ ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿದೆ.

ದಿನಸಿ, ತರಕಾರಿಗೆ ಬಂದವರೂ ವಾಪಾಸ್!:
ಎಟಿಎಂ, ಮೆಡಿಕಲ್ ಹಾಗೂ ದಿನಸಿ ವಸ್ತುಗಳ ಖರೀದಿಗಾಗಿ ಒಂದಕ್ಕಿಂತ ಹೆಚ್ಚು ಮಂದಿ ಬಂದಿದ್ದರೆ ಅಂತವರನ್ನೆಲ್ಲಾ ತಡೆದ ಪೊಲೀಸ್ ಸಿಬ್ಬಂದಿಗಳು ಅವರನ್ನೆಲ್ಲಾ ಮನೆಗೆ ವಾಪಾಸ್ ಕಳುಹಿಸಿದರು. ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ದಿನಸಿ ಹಾಗೂ ತರಕಾರಿ ಖರೀದಿಗಾಗಿ ಬೈಕ್‌ನಲ್ಲಿ ಬಂದ ಕೆಲ ಜನರನ್ನು ತಡೆದು ವಾಪಾಸ್ ಕಳುಹಿಸಿದ ಪ್ರಸಂಗವೂ ನಡೆಯಿತು. ಇನ್ನು ಆಸ್ಪತ್ರೆಗಳಿಗೂ ಒಬ್ಬೊಬ್ಬರೆ ಬರಬೇಕು ಎಂದು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೋರ್ವರು ಆಕ್ರೋಶಭರಿತವಾಗಿ ಹೇಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಆಕ್ರೋಶ:
ಲಾಕ್‌ಡೌನ್‌ಗೆ ಜನರೆಲ್ಲರೂ ಹೊಂದಿಕೊಳ್ಳುತ್ತಿರುವ ಹೊತ್ತಲ್ಲೇ ಪೊಲೀಸರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲಾಡಳಿತ ಅನುವು ಮಾಡಿಕೊಟ್ಟಿರುವ ಸಮಯದಲ್ಲಿ ಖರೀದಿಗೆ ಬಂದರೆ ವಾಪಾಸ್ ಕಳುಹಿಸುತ್ತಿದ್ದಾರೆ. ಹನ್ನೊಂದು ಗಂಟೆಯ ಬಳಿಕ ಬಂದರೆ ವಾಹನಗಳನ್ನು ವಶ ಪಡೆಯುತ್ತಾರೆ. ನಾವೇನು ಹೊಟ್ಟೆಗೆ ಮಣ್ಣು ತಿನ್ನುವುದಾ ಎಂದು ಸಾರ್ವಜನಿಕರು ಪೊಲೀಸರ ವಿರುದ್ದ ಆಕ್ರೋಶಭರಿತವಾದ ಮಾತುಗಳನ್ನಾಡುತ್ತಿರುವ ದೃಶ್ಯಗಳು ಕಂಡುಬಂದವು.

ಶಾಸ್ತ್ರೀ ಸರ್ಕಲ್‌ನಲ್ಲಿ ವಾಹನ ದಟ್ಟಣೆ:
ಪೊಲೀಸ್ ಚೆಕ್‌ಪಾಯಿಂಟ್ ಇರುವ ಶಾಸ್ತ್ರೀವೃತ್ತದಲ್ಲಿ ಪಿಎಸ್‌ಐ ಹರೀಶ್ ಆರ್ ನಾಚಿii ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿಕೊಂಡಿದ್ದ ವೇಳೆಯಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಈಗಾಗಲೇ ನಗರದ ಎರಡು ರಸ್ತೆಗಳಲ್ಲಿ ಒಚಿದು ರಸ್ತೆಯಲ್ಲಿ ಮಾತ್ರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು, ಒಂದೇ ರಸ್ತೆಯಲ್ಲಿ ತಪಾಸಣೆ ಮಾಡಿದ್ದರಿಂದ ಹೋಗುವ ಮತ್ತು ಬರುವ ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಉಚಿಟಾಯಿತು. ತಪಾಸಣೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ ಬಳಿಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಾಯಿತು.

ಮಾಡಿದ್ದೇನು ಸರಿ..ಆದರೆ ಈ ರೀತಿನಾ?:
ಲಾಕ್‌ಡೌನ್ ಆರಂಭವಾದ ದಿನದಿಂದಲೂ ನಗರಕ್ಕೆ ಸಂಪರ್ಕ ಕಲ್ಪಿಸುವ ಮೂರು ಕಡೆಗಳ ಪ್ರಮುಖ ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಹಾಕಿದ್ದರಿಂದಾಗಿ ಕೆಲ ವಾಹನ ಸವಾರರು, ಪೊಲೀಸರ ಕಣ್ ತಪ್ಪಿಸಲು ಬೇರೆ ಬೇರೆ ಒಳ ರಸ್ತೆಗಳಲ್ಲಿ ಸಂಚಾರ ಬೆಳೆಸುತ್ತಿದ್ದರು. ಹೀಗಾಗಿ ಚೆಕ್ ಪಾಯಿಂಟ್‌ಗಳಲ್ಲಿ ವಾಹನಗಳ ಸಂಖ್ಯೆ ಸಿಗದ ಹಿನ್ನೆಲೆ ನಗರಕ್ಕೆ ಸಂಪರ್ಕ ಕಲ್ಪಿಸುವ ಕೆಲವು ಒಳ ರಸ್ತೆಗಳನ್ನು ಬ್ಯಾರಿಕೇಡ್ ಹಾಗೂ ಪೊಲೀಸ್ ಬ್ಯಾಂಡ್ ಹಾಕಿ ಬಂದ್ ಮಾಡಿದ್ದರು. ಪೊಲೀಸರ ಈ ಕ್ರಮಕ್ಕೆ ಎಲ್ಲರೂ ತಲೆಬಾಗಿದ್ದು, ಜಿಲ್ಲಾಡಳಿತ ವಿಧಿಸಿರುವ ಅವಧಿಯಲ್ಲಿ ತಪಾಸಣೆ ಮಾಡಿ ಕಿರಿಕಿರಿಯನ್ನುಂಟುಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.